ಕತ್ತಲಿನ ಮುನ್ಸೂಚನೆಯನ್ನು ಸಾರಿ ಎಚ್ಚರಿಸುವ ದೇವದೂತನಂತೆ, ಉದ್ಯಾನದತ್ತಲಿನ ತಂಗಾಳಿ ತೀಡುತ್ತಿತ್ತು. ಹಸುರು ಬಯಲಿನಲ್ಲಿ ಮೇಯುತ್ತಿದ್ದ ದನಕರುಗಳು ಉಡುತಡಿಯತ್ತ ನಡೆಯುತ್ತಿದ್ದುವು. ಹಕ್ಕಿಪಕ್ಕಿಗಳು ಕುಕಿಲಿರಿಯುತ್ತಾ ತಮ್ಮ ಗೂಡನ್ನು ಹುಡುಕುತ್ತಿದ್ದವು. ದಿನವಿಡೀ ದುಡಿದ ರೈತರು ತಮ್ಮ ಗೂಡುಗಳತ್ತ ಹೊರಟಿದ್ದರು, ದಣಿದ ಜೀವಕ್ಕೆ ವಿಶ್ರಾಂತಿಯನ್ನು ಕೊಡಲು.
ಉದ್ಯಾನವನದ ಹತ್ತಿರ ನಿಂತು ಮಹಾದೇವಿ, ಸುತ್ತಲೂ ನೋಡಿದಳು. ಮುಳುಗುತ್ತಿರುವ ಸೂರ್ಯನನ್ನು ವೀಕ್ಷಿಸಿದಳು. ಕಣ್ಣುಕೋರೈಸುವ ತನ್ನ ಕಾಂತಿಯನ್ನು ಕಳೆದುಕೊಂಡು ಮಂದವಾದ ಹೊಂಬೆಳಗಿನಿಂದ ಕೂಡಿದ್ದ ಸೂರ್ಯ, ಆಗಲೇ ಅರ್ಧದೇಹವನ್ನು ಪಶ್ಚಿಮಸಮುದ್ರದಲ್ಲಿ ಅದ್ದಿ ಮರೆಯಾಗುತ್ತಿದ್ದ. ಅಣುಅಣುವಾಗಿ ಕೆಳಗೆ ಇಳಿಯುತ್ತಿರುವ ಅವನ ಚಲನೆಯನ್ನು ಗುರುತಿಸಬಹುದಾಗಿತ್ತು. ಕ್ರಮೇಣ ಜಾರಿ ಮರೆಯಾದಂತೆ ಅವನ ದೇಹ ಸಂಪೂರ್ಣವಾಗಿ ಕಾಣದಂತಾಯಿತು.
`ಲೋಕದ ಚಲನವಲನಕ್ಕೆಲ್ಲಾ ರವಿಯೇ ಬೀಜ'ವೆಂದೆನಿಸಿತು ಮಹಾದೇವಿಗೆ. ಈ ಪ್ರಕೃತಿ ವ್ಯಾಪಾರವನ್ನು ತನ್ನ ಮಾನಸಿಕವಾದ ಕ್ರಿಯೆಗೂ ಅನ್ವಯಿಸಿಕೊಂಡಳು:
ಲೋಕದ ಚೇಷ್ಟೆಗೆ ರವಿ ಬೀಜವಾದಂತೆ -
ಕರಣಂಗಳ ಚೇಷ್ಟೆಗೆ ಮನವೇ ಬೀಜ
ಎನಗುಳ್ಳದೊಂದು ಮನ,
ಆ ಮನ ನಿಮ್ಮಲ್ಲಿ ಒಡವೆರೆದ ಬಳಿಕ
ಎನಗೆ ಭವವುಂಟೆ ಚೆನ್ನಮಲ್ಲಿಕಾರ್ಜುನ.
`ನನ್ನ ಮನ ನಿಮ್ಮಲ್ಲಿ ಸೇರಿದಮೇಲೆ, ನನಗೆ ಬೇರೆ ಚಲನೆಯಿಲ್ಲ. ರವಿ ಪಶ್ಚಿಮ ಸಮುದ್ರದಲ್ಲಿ ಐಕ್ಯವಾದಂತೆ, ನಾನು ನಿಮ್ಮಲ್ಲಿ ಐಕ್ಯಳಾಗುವವಳು. ನನ್ನ ಜೀವನವೆಲ್ಲಾ ಆ ಚೆನ್ನಮಲ್ಲಿಕಾರ್ಜುನನೆಂಬ ಸಮುದ್ರದತ್ತ ಕೈಕೊಂಡ ಪ್ರಯಾಣ' ಎಂದುಕೊಂಡಳು.
ಆ ಸಂಜೆ, ಇಂತಹ ಅಪೂರ್ವವಾದ ಸಂದೇಶವನ್ನು ಕೊಟ್ಟಂತೆ ಅನಿಸಿತು ಆಕೆಗೆ. ಅದನ್ನೇ ಮತ್ತೆ ಮತ್ತೆ ನೆನೆಯುತ್ತಾ ಮನೆಯನ್ನು ಸೇರಿದಳು.