ದಿಗಂಬರದ ದಿವ್ಯಾಂಬರೆ
೧
ಈ ದಿನ ಉಡುತಡಿ ಅತ್ಯಂತ ಕೋಲಾಹಲ ಸಂಭ್ರಮಗಳಿಂದ ಕೂಡಿತ್ತು. ಇಂದು ಕೌಶಿಕನ ವೈಹಾಳಿಯ ವಿನೋದವು ನಡೆಯಲು ಗೊತ್ತಾಗಿದ್ದ ದಿನ. ಅದರ ಸಿದ್ಧತೆಯ ಕೊನೆಯ ಘಟ್ಟದಲ್ಲಿತ್ತು ಪ್ರಜಾಸಮುದಾಯ.
ಮಧ್ಯಾಹ್ನದ ಮೇಲೆ ಕೌಶಿಕ, ವೈಹಾಳಿಯ ವಿಶಾಲವಾದ ಬಯಲಿನ ಕಡೆಗೆ ತೆರಳಬೇಕಾಗಿತ್ತು. ಬೆಳಗಿನಿಂದಲೇ ಅದರ ಸಿದ್ಧತೆಗೆ ಪ್ರಾರಂಭವಾಗಿತ್ತು. ರಾಜಬೀದಿಯಲ್ಲಿ ಅರಸನ ಕುದುರೆಯ ಸೈನ್ಯವೆಲ್ಲಾ ಸಾಲುಸಾಲಾಗಿ ನಡೆದು ಹೋಯಿತು. ಅನಂತರ ಕಾಲಾಳಿನ ಸೈನ್ಯ ಅದನ್ನು ಹಿಂಬಾಲಿಸಿತು. ಕೌಶಿಕನ ಬಳಿ ಆನೆಯ ಸೈನ್ಯವಿದ್ದರೂ ಅದನ್ನು ಈ ಉತ್ಸವಕ್ಕೆ ತಂದಿರಲಿಲ್ಲ.
ಆದರೆ ಪರ್ವತೋಪಮವಾದ ಪಟ್ಟದ ಆನೆಯೊಂದು ಮಾತ್ರ ನಡೆದಿತ್ತು ರಾಜಬೀದಿಯಲ್ಲಿ. ರಾಜ ವೈಹಾಳಿಯಿಂದ ಹಿಂತಿರುಗಿ ಪುರಪ್ರವೇಶ ಮಾಡುವಾಗ ಈ ಪಟ್ಟದ ಆನೆಯನ್ನೇರಿ ಪಟ್ಟಣಿಗರಿಗೆಲ್ಲಾ ದರ್ಶನವನ್ನು ಕೊಡುತ್ತಾ ಉತ್ಸವದಿಂದ ಹಿಂತಿರುಗಬೇಕೆಂಬುದು ಅಂದು ಏರ್ಪಾಡಾಗಿದ್ದ ಕಾರ್ಯಕ್ರಮ. ಪಟ್ಟದ ಆನೆಯನ್ನು ಹಿಂಬಾಲಿಸಿ ಇನ್ನೊಂದು ಆನೆ ನಡೆದಿತ್ತು.
ಅದರ ಹಿಂದೆ ನಾಲ್ಕು ಜನ ಸಹಣಿಗಳು ಒಂದು ಕುದುರೆಯನ್ನು ಹಿಡಿದುಕೊಂಡು ಹೋಗುತ್ತಿದ್ದರು. ಅಚ್ಚಕಪ್ಪು ಬಣ್ಣದ ಆ ಕುದುರೆಯ ಮೈಕಾಂತಿ ಥಳಥಳನೆ ಹೊಳೆಯುತ್ತಿತ್ತು. ನೆಲದಮೇಲೆ ನಿಂತೂ ನಿಲ್ಲದಂತೆ ಕುಣಿಯುತ್ತಾ, ರಸ್ತೆಯ ಆ ಕೊನೆಯಿಂದ ಈ ಕೊನೆಯ ನೆಗೆದಾಡುತ್ತಾ ತನ್ನನ್ನು ಹಿಡಿದಿರುವ ಸವಾರರನ್ನು ಸಾಕು ಮಾಡುತ್ತಿತ್ತು. ಅದೇ ಹೊಸದಾಗಿ ಬಂದ ಕುದುರೆ, ಇಂದು ರಾಜನು ಪಳಗಿಸಬೇಕಾದದ್ದು ವೈಹಾಳಿಯಲ್ಲಿ.
ಈ ಕುತೂಹಲಕರವಾದ ದೃಶ್ಯವನ್ನು ನೋಡುವುದಕ್ಕಾಗಿಯೇ ನೂರಾರು ಜನ ಆಗಲೇ ವೈಹಾಳಿಯ ಬಯಲತ್ತ ನಡೆಯುತ್ತಿದ್ದರು. ಶಂಕರಿಗೆ ತಾನೂ ಹೋಗಬೇಕೆಂಬ ಕುತೂಹಲ. ಆದರೆ ಮಹಾದೇವಿಯಿಂದ ಅದಕ್ಕೆ ಯಾವ ಪ್ರೋತ್ಸಾಹವೂ ದೊರೆಯಲಿಲ್ಲ.