ಪುಟ:Kadaliya Karpoora.pdf/೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೭೪

ಕದಳಿಯ ಕರ್ಪೂರ

- ಒಂದೊಂದೂ ಕೌಶಿಕನ ಮನಸ್ಸನ್ನು ಕೊರೆದು ಒಳಹೊಕ್ಕವು. ಮಿಂಚಿನ ವೇಗದಿಂದ ಆಕೆ ಒಳಗೆ ಹೋಗಿ ಮರೆಯಾಗಿದ್ದಳು. ಆದರೆ ಕೌಶಿಕ ತನ್ನ ಸ್ಥಾನದ ಗಾಂಭೀರ್ಯವನ್ನು ಮರೆತು, ಬಿಟ್ಟ ಕಣ್ಣುಗಳಿಂದ ಅತ್ತಲೇ ನೋಡುತ್ತಿದ್ದ.

ಕೆಳಗೆ ಸೇರಿದ್ದ ಪುರಪ್ರಮುಖರು ರಾಜನ ದೃಷ್ಟಿಗಾಗಿ ಕಾಯುತ್ತಿದ್ದರು. ಆದರೆ ಅದು ಎತ್ತಲೋ ತಿರುಗಿಬಿಟ್ಟಿದೆ ! ಅವರು ಕೊಟ್ಟ ಭಾರವಾದ ಹೂವಿನ ಹಾರವನ್ನು ಆನೆ ಮೇಲಕ್ಕೆತ್ತಿದೆ. ಕೆಳಗಿನವರು ಕೊಟ್ಟ ಹಾರವನ್ನು ತನ್ನ ಸೊಂಡಿಲಿನಿಂದ ಮೇಲೆತ್ತಿ ರಾಜನಿಗೆ ಒಪ್ಪಿಸುವಂತಹ ಶಿಕ್ಷಣವನ್ನು ಆನೆಗೆ ಕೊಡಲಾಗಿತ್ತು. ತನ್ನ ಸಮೀಪಕ್ಕೆ ಬಂದೊಡನೆಯೇ ಹೂವಿನ ಹಾರವನ್ನು ರಾಜ ತೆಗೆದುಕೊಳ್ಳುವುದನ್ನೇ ನಿರೀಕ್ಷಿಸುತ್ತಾ ಕಾಯುತ್ತಿದೆ. ನೆರೆದ ಪ್ರಮುಖರೆಲ್ಲಾ ರಾಜನನ್ನೇ ನೋಡುತ್ತಿದ್ದಾರೆ. ಆದರೆ ರಾಜನ ನೋಟ ಮಾತ್ರ ಬೇರೆ ಕಡೆಗಿದೆ!

ಮಹಾದೇವಿ ಸರಕ್ಕನೆ ಒಳಗೆ ಹೋದುದನ್ನು ಕೆಲವರು ನೋಡಿದರು. ಅವಳನ್ನು ಬೆನ್ನಟ್ಟಿಹೋಗಿರುವ ರಾಜದೃಷ್ಟಿ ಇನ್ನೂ ಅತ್ತಲೇ ನೆಟ್ಟಿರುವುದನ್ನು ಗಮನಿಸಿದರು. ವಿಷಯದ ಸುಳುಹು ಸಿಕ್ಕದಂತಾಯಿತು. ಅಷ್ಟರಲ್ಲಿ ವಸಂತಕ ರಾಜನ ಈ ಅನಿರೀಕ್ಷಿತ ಪರಿವರ್ತನೆಯನ್ನು ಕಂಡು ಸ್ವಲ್ಪ ಮುಂದೆ ಸರಿದು ಎಚ್ಚರಿಸಿದ.

ಬೆಚ್ಚಿ ಬಿದ್ದವನಂತೆ ರಾಜ ಎಚ್ಚತ್ತು ಕೆಳಗೆ ನೋಡುತ್ತಾ ಊರಿನ ಪ್ರಮುಖರ ವಂದನೆಗಳನ್ನು ಸ್ವೀಕರಿಸಿದ. ಆನೆಯ ಸೊಂಡಿಲಿನ ಹಾರವನ್ನು ತೆಗೆದುಕೊಂಡ. ಎಲ್ಲರೂ ಹಿಂದೆ ಸರಿದರು. ಆನೆ ಮುಂದೆ ಹೊರಟಿತು. ಕೌಶಿಕನ ದೃಷ್ಟಿ ಮತ್ತೆ ಮಹಾದೇವಿಯ ಮಹಡಿಯ ಕಡೆ ತಿರುಗಿತ್ತು. ಆನೆ ಮುಂದೆ ಹೋದಂತೆಲ್ಲಾ ಕೌಶಿಕ ಹಿಂದೆ ಹಿಂದೆ ತಿರುಗಿ ಒಂದೆರಡು ಬಾರಿ ಮಹಡಿಯ ಕಡೆಗೆ ನೋಡಿದ. ಗಾಳಿ ಬೀಸಿದರೆ ಹಿಂದಕ್ಕೆ ಹಾರುವ ಧ್ವಜಪಟದಂತೆ ಅವನ ಮನಸ್ಸು ಹಿಂದೆ ಹಿಂದೆ ಚಲಿಸುತ್ತಿತ್ತು.

ವಸಂತಕನತ್ತ ತಿರುಗಿ ಕೇಳಿದ :

``ಆ ಮನೆ ಯಾರದು, ವಸಂತಕ ?

``ಏಕೆ, ಮಹಾಪ್ರಭುಗಳ ಕಣ್ಣು ಅತ್ತ ಬಹಳವಾಗಿ ತಿರುಗುತ್ತಿದೆಯಲ್ಲ? ಹಾಸ್ಯದ ಧ್ವನಿಯಿತ್ತು ವಸಂತಕನ ಪ್ರಶ್ನೆಯಲ್ಲಿ. ಕೆಳಗಿರುವವರಿಗೆ ಇವರ ಮಾತುಗಳು ಕೇಳುವಂತಿರಲಿಲ್ಲ. ವಾದ್ಯಗಳು ಭೋರ್ಗರೆಯುತ್ತಿದ್ದುವು.