ಕೌಶಿಕನ ಆನೆ ಈ ವೇಳೆಗೆ ತೀರಾ ಸಮೀಪಕ್ಕೆ ಬಂದಿತ್ತು. ಮಹಾದೇವಿಯ ಮನೆಯ ಮುಂದೇ ಬರತೊಡಗಿತ್ತು. ಅಲ್ಲಿ ನಗರದ ಪ್ರಮುಖ ವರ್ತಕರೆಲ್ಲರೂ ಸೇರಿ, ರಾಜನಿಗೆ ಭಕ್ತಿಪೂರ್ವಕವಾದ ಗೌರವವನ್ನು ಅರ್ಪಿಸಲು ಏರ್ಪಡಿಸಿಕೊಂಡಿದ್ದರು. ಆದ್ದರಿಂದ ಅಲ್ಲಿ ಆನೆ ನಿಂತಿತು.
ಕೌಶಿಕ ಮಹಡಿಯ ಮೇಲೆ ನಿಂತವರ ವಂದನೆಗಳನ್ನೆಲ್ಲಾ ಸ್ವೀಕರಿಸಲು ತಲೆಯೆತ್ತಿ ಅತ್ತ ನೋಡಿದ. ಅಲ್ಲಿದ್ದ ಅಪೂರ್ವ ಸೌಂದರ್ಯರಾಶಿ ಕೌಶಿಕನ ಗಮನವನ್ನು ಸೆಳೆಯಿತು. ಅಲಂಕಾರಹೀನತೆಯು ಮಹಾದೇವಿಯ ಸೌಂದರ್ಯವನ್ನು ಮುಚ್ಚಲು ಪ್ರಯತ್ನಿಸುತ್ತಿದ್ದರೂ ಸೌಂದರ್ಯೋಪಾಸಕನಾದ ಕೌಶಿಕನ ಕಣ್ಣು ಆ ರೂಪಸಂಪತ್ತನ್ನು ಕ್ಷಣಮಾತ್ರದಲ್ಲಿ ಗುರುತಿಸಿತು.
ಆವುದೀ ಸ್ತ್ರೀರತ್ನ ! ಮುದ್ದಾದ ದುಂಡುಮುಖದಲ್ಲಿ ಮಿನುಗುತ್ತಿರುವ ಕಾಂತಿಯುಕ್ತವಾದ ಆ ಕಣ್ಣುಗಳು ಅವನ ಮನಸ್ಸನ್ನು ಮೊಟ್ಟಮೊದಲು ಸೆಳೆದುವು. ತಲೆಯ ತುಂಬಾ ಸೆರಗನ್ನು ಹೊದೆದಿದ್ದರೂ ಅದರ ಹಿಡಿತವನ್ನು ಮೀರಿ ಮುಂಗುರುಳುಗಳು ಮುಖದ ಮೇಲೆ ಹಾರಾಡುತ್ತಾ ಅಪೂರ್ವವಾದ ಶೋಭೆಯನ್ನುಂಟು ಮಾಡಿದ್ದವು. ಮುಖದ ಮನೋಹರತೆಯನ್ನು ಮುಮ್ಮಡಿಗೊಳಿಸುತ್ತಿರುವ ಅವಳ ಮೂಗಿನ ಮಾಟ, ಅವಳ ಚೆಂದುಟಿಯ ಚೆಲುವು ಅವನನ್ನು ಆಕರ್ಷಿಸಿತು.
ಕೌಶಿಕ ನೋಡಿದ. ಆ ಎರಡು ಕಣ್ಣುಗಳು ತನ್ನನ್ನೇ ದಿಟ್ಟಿಸುತ್ತಿದ್ದುವು. ಆ ನೋಟ ವಿದ್ಯುತ್ ಸ್ಪರ್ಶವಾದಂತಾಯಿತು ಆತನಿಗೆ. ಆ ಮುಗ್ಧನಯನಗಳ ಮನೋಹರತೆ ಅವನಲ್ಲಿ ತದ್ವಿರುದ್ಧವಾದ ಭಾವನೆಯನ್ನು ಕೆರಳಿಸುವುದಕ್ಕೆ ಕಾರಣವಾಯಿತು. ಅವಳನ್ನೇ ದಿಟ್ಟಿಸಿ ನೋಡತೊಡಗಿದನು.
ರಾಜ ತನ್ನನ್ನೇ ದಿಟ್ಟಿಸಿ ನೋಡುತ್ತಿರುವುದನ್ನು ಕಂಡು, ತಪ್ತಕಾಂಚನವರ್ಣ ದಂತಹ ಮಹಾದೇವಿಯ ಮುಖಕಮಲವು ಇನ್ನೂ ಕೆಂಪಾಯಿತು. ಸರಕ್ಕನೆ ಕಣ್ಣುಗಳನ್ನು ಕೆಳಕ್ಕಿಳಿಸಿದಳು. ಕತ್ತೂ ಬಾಗಿತು.
ಈ ಕಂಬುಗ್ರೀವೆಯ ಅಪೂರ್ವವಾದ ಈ ವಿನ್ಯಾಸವನ್ನು ಕಂಡ ಕೌಶಿಕನ ಕಣ್ಣುಗಳು ಇನ್ನೂ ಅಗಲವಾದವು. ಅವನ ದೃಷ್ಟಿ ಅಲ್ಲಿಂದ ಕೆಳಗೂ ಇಳಿದು ಅವಳ ಅಂಗಾಂಗಗಳ ಸೌಂದರ್ಯವನ್ನು ಕಾಣಲು ಸಾಹಸಪಡುತ್ತಿತ್ತು. ಇದನ್ನು ಕಂಡ ಮಹಾದೇವಿ ಸರಕ್ಕನೆ ತಿರುಗಿ, ಒಳಗೆ ನಡೆಯತೊಡಗಿದಳು. ಅವಳು ತಿರುಗಿದ ರೀತಿ, ಹಂಸಗಮನದಂತಹ ಅವಳ ನಡಿಗೆ, ಹೊದೆದ ಸೆರಗಿನ ಅಂಚನ್ನೂ ದಾಟಿಕೊಂಡು, ಅತಿನೀಳವಾಗಿ ಕೆಳಗಿಳಿದು ಓಲಾಡುತ್ತಿರುವ ಕೇಳರಾಶಿ
ಪುಟ:Kadaliya Karpoora.pdf/೭೪
ಗೋಚರ
ಈ ಪುಟವನ್ನು ಪ್ರಕಟಿಸಲಾಗಿದೆ
ದಿಗಂಬರದ ದಿವ್ಯಾಂಬರೆ
೭೩