ಅದರ ಸುತ್ತುಗೋಡೆ ಮತ್ತು ಮೇಲ್ಛಾವಣಿಯಾಗಿತ್ತು. ಅದರಲ್ಲಿ ಸುಂದರವಾದ ಹೂವುಗಳು ಅರಳಿ ಅದೊಂದು ಪರಿಮಳದ ಮಂಟಪದಂತೆ ತೋರುತ್ತಿತ್ತು.
ರಾಜನು ಅತ್ತ ಹೊರಡುವ ನಿರೀಕ್ಷೆ ತಿಳಿದು, ಅವನ ಆಗಮನಕ್ಕೆ ಎಲ್ಲಾ ಸಿದ್ಧತೆಯೂ ಆಗಿತ್ತು. ಕೌಶಿಕ ಮತ್ತು ವಸಂತಕ ಪ್ರವೇಶಿಸಿದರು. ಅಲ್ಲಿದ್ದ ಪೀಠಗಳ ಮೇಲೆ ಕುಳಿತುಕೊಂಡರು.
``ವಸಂತಕ, ತನ್ನ ಮನಸ್ಸು ನಿನಗಾಗಲೇ ಗೊತ್ತಿದೆ ಕೌಶಿಕ ಆರಂಭಿಸಿದ.
``ಏನು ರಾಜೇಂದ್ರ ಅದು ? ನನಗೇನೂ ಗೊತ್ತಿಲ್ಲವಲ್ಲ ! ಬೇಕಂತಲೇ ಹೇಳಿದ ವಸಂತಕ.
``ನಿನ್ನ ವಿನೋದ ಹಾಗಿರಲಿ; ಒಂದು ಪ್ರಶ್ನೆ ಕೇಳುತ್ತೇನೆ. ಆ ಓಂಕಾರ ಶೆಟ್ಟಿಯ ಮಗಳಿಗೆ ಮದುವೆ ಆಗಿದೆಯೇ ? ನಿನಗೇನಾದರೂ ಅದು ಗೊತ್ತೇ?" ವಸಂತಕ ಪುರಪ್ರಮುಖರ ಸಂಪರ್ಕವನ್ನು ಇಟ್ಟುಕೊಂಡಿದ್ದ. ಓಂಕಾರ ಶೆಟ್ಟಿಯ ವಿಚಾರವು ಆತನಿಗೆ ತಿಳಿದಿತ್ತು. ಹೇಳಿದ :
``ಓ ! ಅದೋ ನಿನ್ನ ಮನಸ್ಸು ! ಗೊತ್ತು.... ಮಹಾದೇವಿಗೆ ಇನ್ನೂ ಮದುವೆಯಾಗಿಲ್ಲ. ``ಮಹಾದೇವಿ !
``ಹೌದು, ಅದು ಆಕೆಯ ಹೆಸರು.
``ಇನ್ನೂ ಮದುವೆಯಾಗಿಲ್ಲವೇ ! ಸದ್ಯ ಬದುಕಿದೆ ! ಸಮಾಧಾನದ ನಿಟ್ಟುಸಿರು ಬಿಟ್ಟ ಕೌಶಿಕ.
``ಇದೇನು ಮಹಾರಾಜ ! ಅವಳಿಗೆ ಮದುವೆಯಾಗದಿದ್ದರೆ ನೀನೇಕಯ್ಯ ಬದುಕಿದೆ? ಅರ್ಥವಾಗದವನಂತೆ ಕೇಳಿದ ವಸಂತಕ.
``ಇನ್ನು ಅದನ್ನೆಲ್ಲ ಬಿಟ್ಟುಬಿಡು, ವಸಂತಕ. ಸುಮ್ಮನೆ ಮುಚ್ಚುಮರೆಯಿಂದ ಏನು ಪ್ರಯೋಜನ ? ಅವಳಿಗೆ ಸಂಪೂರ್ಣವಾಗಿ ನಾನು ಮನಸೋತಿದ್ದೇನೆ. ಒಂದು ವೇಳೆ ಅವಳಿಗೆ ಮದುವೆಯಾಗಿದ್ದರೆ... ಎಂಬ ಚಿಂತೆಯೇ ನನ್ನನ್ನು ಬಾಧಿಸುತ್ತಿತ್ತು. ಅದೃಷ್ಟವಶಾತ್ ಅವಳಿಗೆ ಮದುವೆಯಾಗಿಲ್ಲ. ಇನ್ನು ಅವಳು ನನ್ನವಳಾದಂತೆಯೇ ಸರಿ. ಅವಳ ಸೌಂದರ್ಯ ರಾಜನನ್ನು ಆಕರ್ಷಿಸಿದೆಯೆಂಬುದನ್ನು ವಸಂತಕ ತಿಳಿದಿದ್ದ. ಆದರೆ ಅದು ಇಂತಹ ದೃಢನಿರ್ಧಾರದ ಮಟ್ಟವನ್ನು ಮುಟ್ಟಿದೆಯಂದು ಆತ ಭಾವಿಸಿರಲಿಲ್ಲ.
``ರಾಜೇಂದ್ರ, ಅವಳೊಬ್ಬ ಸಾಮಾನ್ಯ ಶೆಟ್ಟಿಯ ಮಗಳು... ಮಧ್ಯದಲ್ಲಿ, ಅವನ ಮಾತನ್ನು ತಡೆದು ಹೇಳಿದ ಕೌಶಿಕ.