ವಿಷಯಕ್ಕೆ ಹೋಗು

ಪುಟ:Kadaliya Karpoora.pdf/೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೯೭


ಹೇಗೆ ನಡೆಸುತ್ತಾನೋ ಹಾಗೆ ನಡೆಯುತ್ತೇನೆ. ನಾನು ಅನಾಥೆಯಲ್ಲ ; ನನ್ನ ಪತಿ ಬಳಿಯಲ್ಲಿಯೇ ಇರುವಾಗ ನನಗಾರ ಹೆದರಿಕೆ ?'

ಈ ಭಾವ ಅವಳಿಗೆ ಧೈರ್ಯವನ್ನು ಕೊಟ್ಟಿತು. ಹಾಸಿಗೆಯಿಂದ ಮೇಲೆ ಎದ್ದು ಕುಳಿತಳು. ಲಿಂಗಮ್ಮ ಮಲಗಿದ್ದು ಕತ್ತಲಲ್ಲಿ ಅಸ್ಪಷ್ಟವಾಗಿ ಕಾಣುತ್ತಿತ್ತು.

`ಈ ಹುಟ್ಟಿದ ಮನೆಯನ್ನೂ, ವಾತ್ಸಲ್ಯಮಯರಾದ ತಂದೆತಾಯಿಗಳನ್ನೂ ಬಿಟ್ಟು ನಾಳೆ ಹೋಗುತ್ತೇನೆ, ಮತ್ತೆ ಬರುತ್ತೇನೋ ಇಲ್ಲವೋ.

ಈ ಆಲೋಚನೆ ಅವಳನ್ನು ಅಲುಗಿಸಿತು.

`ಮತ್ತೇಕೆ ಬರುವುದಿಲ್ಲ ! ಎಲ್ಲಿ ಹೋಗುತ್ತೀ?' ಅದಕ್ಕೆ ಅವಳ ಬಳಿಯಲ್ಲಿ ಉತ್ತರವಿರಲಿಲ್ಲ.

``ಏನೋ ಯಾವುದನ್ನೂ ನಾನು ಅರಿಯೆ. ನೀನೇ ಮಾರ್ಗದರ್ಶಕನಾಗು" ಎಂದು ತನ್ನ ಪತಿಯನ್ನೇ ಮರೆಹೊಕ್ಕು ಧ್ಯಾನಾಸಕ್ತಳಾಗಿ ಕುಳಿತು ಕಣ್ಣು ಮುಚ್ಚಿದಳು.

ಹೊರಗೆ ಕತ್ತಲೆ ಕವಿದಿತ್ತು. ಮಹಾದೇವಿಯ ಅಂತರಂಗವೂ ಬೆಳಕಿಗಾಗಿ ಹಂಬಲಿಸುತ್ತಿತ್ತು. ಅದೆಷ್ಟು ಕಾಲ ಧ್ಯಾನಾಶಕ್ತಳಾಗಿದ್ದಳೋ, ಅದಾವಾಗ ಮಲಗಿದಳೋ ಅವಳಿಗೇ ತಿಳಿಯದಾಗಿತ್ತು.

6


ಬೆಳಿಗ್ಗೆ ವಸಂತಕ ರಾಜಪರಿವಾರದೊಡನೆ ಬಂದಾಗ ಮಹಾದೇವಿ ಇನ್ನೂ ಪೂಜೆಯಲ್ಲಿ ತೊಡಗಿದ್ದಳು. ಓಂಕಾರ ಅವನನ್ನು ಬರಮಾಡಿಕೊಂಡು ಕುಳ್ಳಿರಿಸಿದ. ಅವನ ಜೊತೆಯಲ್ಲಿ ಬಂದ ಅಂತಃಪುರ ಸ್ತ್ರೀಯರನ್ನು ಲಿಂಗಮ್ಮ ಒಳಗೆ ಕರೆಯಲೇ ಬೇಕಾಯಿತು. ಆ ದಂಪತಿಗಳ ಮನಸ್ಸು ಇಂದು ಅನೇಕ ಭಾವಗಳ ತುಮುಲ ರಂಗವಾಗಿತ್ತು. ಯಾಂತ್ರಿಕವಾಗಿ ಕರ್ತವ್ಯವನ್ನು ಮಾಡುತ್ತಿದ್ದಂತೆ ತೋರುತ್ತಿತ್ತು.

ಇತ್ತ ಮಹಾದೇವಿ ಪೂಜೆಯಲ್ಲಿ ನಿರತಳಾಗಿದ್ದರೂ ಅವಳ ಮನಸ್ಸು ಗಾಳಿಗೊಡ್ಡಿದ ದೀಪದಂತೆ ಹರಿದಾಡುತ್ತಿತ್ತು. ಇದು ತಾನು ಕೈಗೊಂಡಿರುವ ನಿರ್ಧಾರದ ಆಗುಹೋಗುಗಳನ್ನು, ಮನಸ್ಸು ಬೇಡವೆಂದರೂ ಮತ್ತೆ ಆಲೋಚಿಸುತ್ತಿತ್ತು.

`ಅರಮನೆಯ ಅಗ್ನಿಪರೀಕ್ಷೆಗೆ ನಾನು ಗುರಿಯಾಗುತ್ತಿದ್ದೇನೆ. ನನ್ನ ಸೌಂದರ್ಯವನ್ನೇ ಬಯಸಿ ಬಂದ ಕೌಶಿಕನ ಬಳಿಗೆ, ಹೀಗೆ ನಾನು ಹೋಗುತ್ತಿರುವುದು ಲೋಕದ ಕಣ್ಣಿಗೆ ಹೇಗೆ ಕಾಣಬಹುದು! ಮದುವೆಯಾಗದ ನಾನು ಅವನ