ಪುಟ:Kannadigara Karma Kathe.pdf/೧೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಒಳಸಂಚುಗಳು

೮೭

ಕಾವಲುಗಾರರು “ತಿರುಮಲರಾಯರು ಪ್ರತಿಬಂಧಿಸಲಿಕ್ಕೆ ಹೇಳಿದ್ದಾರೆಂದು” ಆ ಸವಾರನನ್ನು ಮುಂದಕ್ಕೆ ಹೋಗಗೊಡಲಿಲ್ಲ. ಈ ವರಮಾನವನ್ನು ಆ ಟೋಳಿಯ ಮುಖ್ಯಸ್ಥನು ಬಾದಶಹನ ಮುಂದೆ ಹೇಳಲು, ಆತನು ಗಾಬರಿಯಾದನು. ತಿರುಮಲನು ಮಹಾಕಪಟಿಯಿದ್ದು ನಮ್ಮ ನಾಶಮಾಡಲಿಕ್ಕೆ ಹಿಂದು ಮುಂದು ನೋಡುವವನಲ್ಲವಾದ್ದರಿಂದ, ನಾವು ಇನ್ನು ಬೇಗನೆ ವಿಜಯನಗರವನ್ನು ಬಿಡಬೇಕೆಂದು ಮಂತ್ರಿಯೊಡನೆ ಬಾದಶಹನು ಆಲೋಚಿಸಿದನು. ತಿರುಮಲನ ವಿಷಯವಾಗಿ ಸಂಶಯ ಬಂದಂತೆ ಈಗ ತಾನು ತೋರಿಸಿದರೆ, ಈಗಲೇ ಅನರ್ಥವಾದೀತೆಂದು ತಿಳಿದು, ಬಾದಶಹನು ತನ್ನ ಸಂಶಯವನ್ನು ಹೊರಗೆ ತೋರಗೊಡದೆ, ತಿರುಮಲನ ಸಮ್ಮತಿಯಿಂದ ತುಂಗಭದ್ರೆಯನ್ನು ದಾಟಲಿಕ್ಕೆ ಆತುರನಾದನು. ಹೀಗೆ ಚಾಣಾಕ್ಷನಾದ ರಾಮರಾಜನು ಬಾದಶಹನ ವಿಷಯವಾಗಿ ತಿರುಮಲನಲ್ಲಿಯೂ ತಿರುಮಲನ ವಿಷಯವಾಗಿ ಬಾದಶಹನಲ್ಲಿಯೂ ಸಂಶಯವು ಉತ್ಪನ್ನವಾಗುವಂತೆ ಮಾಡಿದನು. ಬಾದಶಹನು ಒಂದು ದಿನ ತಿರುಮಲನನ್ನು ಕರಿಸಿ, ನಾನು ಇನ್ನು ವಿಜಾಪುರಕ್ಕೆ ಹೋಗುವೆನೆಂದು ಹೇಳಲು, ತಿರುಮಲನು ಮನಸ್ಸಿನಲ್ಲಿ ಸಂತೋಷಪಟ್ಟರೂ ಲೋಕರೀತಿಯಂತೆ ಬಾದಶಹನಿಗೆ- “ಇಷ್ಟು ಅವಸರವೇಕೆ ? ಇನ್ನು ನಾಲ್ಕು ದಿನ ಇದ್ದು ಹೋಗಬೇಕು.” ಮನಸ್ಸಿನಲ್ಲಿ-ಈ ಠಕ್ಕನ ಸಿದ್ಧತೆಯು ಇನ್ನೂ ಪೂರ್ಣವಾದಂತೆ ತೋರುವದಿಲ್ಲ! ಆದ್ದರಿಂದಲೇ ಇನ್ನು ನಾಲ್ಕು ದಿನ ಇರೆಂದು ನನಗೆ ಹೇಳುತ್ತಾನೆ; ಆದರೆ ಈತನಿಂದ ಕಪ್ಪ ಕಾಣಿಕೆಯ ರಕಮನ್ನು ಇಸಕೊಂಡು, ಮಾಂಡಲೀಕತ್ವವನ್ನು ಒಪ್ಪಿಕೊಂಡ ಪತ್ರದ ಮೇಲೆ ಈತನ ಸಹಿ ಮಾಡಿಸಿಕೊಂಡು ಬೇಗನೆ ವಿಜಯನಗರವನ್ನು ಬಿಡಬೇಕು ಎಂದು ಯೋಚಿಸಿ ಕಪ್ಪದ ಹಣವನ್ನು ಬೇಗನೆ ಕೊಡಲಿಕ್ಕೂ, ಕರಾರ ಪತ್ರದ ಮೇಲೆ ಬೇಗನೆ ಸಹಿ ಮಾಡಲಿಕ್ಕೂ ತಿರುಮಲನಿಗೆ ಆಗ್ರಹ ಮಾಡಹತ್ತಿದನು. ಆಗ ತಿರುಮಲನು- “ನಾನು ಬೇಗನೆ ಕಪ್ಪದ ಹಣವನ್ನು ಕೊಡದಿದ್ರೆ, ಅದನ್ನೇ ನೆವಮಾಡಿ ಈತನು ಏನಾದರೂ ಅನರ್ಥ ಮಾಡಿಯಾನೆಂದು ತಿಳಿದು, ಕಪ್ಪದ ಎರಡು ಕೋಟಿ ರೂಪಾಯಿಗಳನ್ನೂ, ಬೇರೆ ನಜರಾಣಿಗಳನ್ನೂ ಕೊಟ್ಟು, ಕರಾರ ಪತ್ರಿಕೆಯ ಮೇಲೆ ಸಹಿ ಮಾಡಿದನು. ಆ ಪತ್ರದಲ್ಲಿ ವಿಜಯನಗರದ ಅರಸರು ವಿಜಾಪುರದ ಬಾದಶಹನ ಮಾಂಡಲೀಕರೆಂದು ಸ್ಪಷ್ಟವಾಗಿ ಒಪ್ಪಿಕೊಂಡಿತ್ತು. ಬಾದಶಹನು ತನ್ನ ಕೆಲಸವಾದ ಮೇಲೆ ಮತ್ತೆ ತಿರುಮಲನಿಗೆ- “ನಮ್ಮ ದರ್ಗೆಯು ಇನ್ನು ನಮ್ಮ ಸ್ವಾಧೀನದಲ್ಲಿರಬೇಕು. ನಮ್ಮ ವಕೀಲನೊಬ್ಬನು ನಿಮ್ಮ ರಾಜಧಾನಿಯಲ್ಲಿರುವನು, ಆತನಿಗೆ ದರ್ಗೆಗೆ ಸಮೀಪವಾಗಿರುವ ಕುಂಜವನವನ್ನು