ಪುಟ:Kannadigara Karma Kathe.pdf/೧೦೧

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪ್ರಕಟಿಸಲಾಗಿದೆ
೮೬
ಕನ್ನಡಿಗರ ಕರ್ಮಕಥೆ
 

ಆದರೆ ಅತ್ತ ಧೂರ್ತನಾದ ರಾಮರಾಜನು ಬಾದಶಹನಿಗೂ ಉಚ್ಚಾಟನೆಯನ್ನು ಕೊಡದೆ ಇರಲಿಲ್ಲ. ತಿರುಮಲನು ತನ್ನನ್ನು ಕರೆ ತಂದಿರುವುದು ತನ್ನನ್ನು ನಾಶಗೊಳಿಸುವದಕ್ಕಾಗಿಯೇ ಎಂಬ ಸಂಶಯವು ಬಾದಶಹನಿಗೆ ಉತ್ಪನ್ನವಾಗುವಂತೆ ರಾಮರಾಜನು ಯುಕ್ತಿಯನ್ನು ಮಾಡಿದನು. ತಿರುಮಲನು ದಕ್ಷಿಣದ ನಿಟ್ಟಿನ ತನ್ನ ಸೈನ್ಯವನ್ನು ಮೆಲ್ಲಮೆಲ್ಲನೆ ಬರಮಾಡಿಕೊಳ್ಳುತ್ತಿದ್ದು, ಅದು ಬಂದಕೂಡಲೆ ತುಂಗಭದ್ರೆಯತ್ತಣ ಹಾದಿಯನ್ನು ಕಟ್ಟಿ, ತನ್ನ ನಾಶಮಾಡುವನೆಂಬ ಸಂಗತಿಯು ಬಾದಶಹನ ಕಿವಿಗೆ ಬಿದ್ದಿತು. ಈ ಮಾತಿನ ನಂಬಿಗೆಯು ಬಾದಶಹನಿಗೆ ಆಗಬೇಕೆಂದು ರಾಮರಾಜನು ಒಂದು ಯುಕ್ತಿಯನ್ನು ಮಾಡಿದನು. ಒಂದು ದಿವಸ ತಿರುಮಲನು ಬಾದಶಹನ ಭೆಟ್ಟಿಗೆ ಹೋದಾಗ, ತಿರುಮಲನ ನಂಬಿಗೆಯ ಸೇವಕನ ಮುಖಾಂತರ ಒಂದು ಪತ್ರವು ಬಾದಶಹನ ಸೇವಕರ ಕೈಗೆ ಸಿಗುವಂತೆ ರಾಮರಾಜನು ಕಪಟವನ್ನು ರಚಿಸಿದನು. ರಾಮರಾಜನ ಯುಕ್ತಿಯು ಸಫಲವಾಗಿ, ತಿರುಮಲನು ಹೋದಬಳಿಕ ಬಾದಶಹನ ಸೇವಕರು ಆ ಪತ್ರವನ್ನು ಬಾದಶಹನ ಕೈಯಲ್ಲಿ ಕೊಟ್ಟರು. ಪತ್ರವು ಕನ್ನಡದಲ್ಲಿ ಸಂಕ್ಷಿಪ್ತವಾಗಿ ಸಂದಿಗ್ಧ ರೀತಿಯಿಂದ ಬರೆಯಲ್ಪಟ್ಟಿತ್ತು. ದಕ್ಷಿಣದ ಒಬ್ಬ ದೊಡ್ಡ ಕಿಲ್ಲೇದಾರನು ಬರೆದಂತೆ ಅದು ಬರೆದಿದ್ದು, ಆ ಪತ್ರದಲ್ಲಿ "ನೀವು ಅಜ್ಞಾಪಿಸಿದಂತೆ ಸೈನ್ಯವನ್ನು ಕಳಿಸಿಕೊಟ್ಟಿರುತ್ತೇನೆ. ಸಾಮಗ್ರಿಯು ಪರಿಪೂರ್ಣವಾಗಿರುತ್ತದೆ. ನಿಮ್ಮ ಇಚ್ಛೆಯೂ ಪೂರ್ಣವಾದರೆ ಹಾದಿಯೊಳಗಿನದೊಂದು ದೊಡ್ಡ ಮುಳ್ಳನ್ನು ಕಿತ್ತಿ ಚಲ್ಲಿದ ಹಾಗಾಗುತ್ತದೆ.” ಎಂದು ಬರೆದಿತ್ತು. ಈ ಪತ್ರದ ಸಂಗತಿಯನ್ನು ಕೇಳಿದ ಕೂಡಲೆ ಬಾದಶಹನು ಸಂತಪ್ತನಾಗಿ, ಈಗಲೇ ತಿರುಮಲನನ್ನು ಕರೆಸಿ ಈ ಪತ್ರದ ಅರ್ಥವೇನೆಂದು ಕೇಳಿ, ಅವನ ತಲೆ ಹಾರಿಸಬೇಕೆಂದು ಮಾಡಿದನು ; ಆದರೆ ಆತನ ಮಂತ್ರಿಯಾದ ಆಸದಖಾನನು- “ಹೀಗೆ ಅವಸರ ಮಾಡುವದು ಸರಿಯಲ್ಲ, ಸ್ವಲ್ಪ ಸಮಾಧಾನ ತಾಳಬೇಕು. ಇಲ್ಲದಿದ್ದರೆ ಸಂಕಟಕ್ಕೆ ಗುರಿಯಾಗಿ ಪೇಚಾಡಬೇಕಾದೀತು, ತಿರುಮಲನು ಈಗಲೇ ತುಂಗಭದ್ರೆಯ ಕಡೆಯ ಮಾರ್ಗವನ್ನು ಕಟ್ಟಿ ನಮ್ಮನ್ನು ನಾಶಮಾಡಿದರೆ ಏನು ಮಾಡಬೇಕು ? ಆದ್ದರಿಂದ ಈಗ ದೊರೆತದ್ದರಲ್ಲಿ ಸಂತುಷ್ಟರಾಗಿ ನಾವು ಮೊದಲು ತುಂಗಭದ್ರೆಯನ್ನು ದಾಟಿಹೋಗೋಣ. ಒಂದು ಸೈನ್ಯದ ಭಾಗವು ಮಾತ್ರ ತುಂಗಭದ್ರೆಯ ಈಚೆಯ ಕಡೆಗೆ ಇರಲಿ,” ಎಂದು ಹೇಳಿದನು.

ಹೀಗೆ ಆಲೋಚನೆಗಳು ನಡೆದಿರುವಾಗ ಮತ್ತೊಂದು ಚಮತ್ಕಾರದ ಸಂಗತಿಯು ಒದಗಿತು. ಬಾದಶಹನು ಒಂದು ದಿನ ಮುಂಜಾನೆ ಒಂದು ಸವಾರರ ಟೋಳಿಯನ್ನು ತುಂಗಭದ್ರೆಯ ಆಚೆಗೆ ಹೋಗಲಿಕ್ಕೆ ಕಳಿಸಿರಲು, ತುಂಗಭದ್ರೆಯ