ಪುಟ:Kannadigara Karma Kathe.pdf/೧೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೯೮

ಕನ್ನಡಿಗರ ಕರ್ಮಕಥೆ

ರಣಮಸ್ತಖಾನನ್ನು ಕುರಿತು- “ನೀವು ಇಂದು ದರ್ಬಾರದಲ್ಲಿ ನಡೆಕೊಂಡದ್ದು ನಮ್ಮ ಬಾದಶಹರ ಗೌವರವಕ್ಕೆ ಒಪ್ಪುವ ಹಾಗಿತ್ತು. ನಮ್ಮ ಬಾದಶಹರು ವಿಜನಗರದ ಮಾಂಡಲೀಕರಲ್ಲ ; ವಿಜನಗರದ ರಾಯರ ಸರಿ ಜೋಡಿಯವರು; ಅವರು ವಿಜಯನಗರದ ರಾಜರಿಗೆ ಬಗ್ಗಿ ಕುರ್ನಿಸಾತ ಮಾಡಲವಶ್ಯಯವಿಲ್ಲ. ಈ ಮಾತು ದರ್ಬಾರದೊಳಗಿನವರಿಗೆಲ್ಲ ಇಂದು ಚೆನ್ನಾಗಿ ಗೊತ್ತಾಯಿತು. ನಿಮ್ಮ ನಡತೆಯನ್ನು ನೋಡಿ ದರ್ಬಾರದವರೆಲ್ಲರಿಗೂ ಸಿಟ್ಟು ಬಂದಿತು ; ಆದರೆ ಸಿಟ್ಟು ಬಂದು ಮಾಡುತ್ತಾರೇನು ? ಎಲ್ಲರು ಮುಂಗೈ ಕಡಿಯುತ್ತ ಸುಮ್ಮನೆ ಕುಳಿತುಕೊಂಡರು! ಒಬ್ಬೊಬ್ಬರು ಇಷ್ಟಿಷ್ಟು ಗಡುತುರ ಕಣ್ಣು ತೆರೆದು ನಿಮ್ಮನ್ನು ನೋಡಹತ್ತಿದರು: ಆದರೆ ನೋಡಿ ಮಾಡುವದೇನು? ರಾಮರಾಜನಾದರೂ ಕಣ್ಣು ಕೆಕ್ಕರಿಸಿ ಕೆಕ್ಕರಿಸಿ ನಿಮ್ಮನ್ನು ನೋಡುತ್ತಿದ್ದನು; ಆದರೆ ಕಣ್ಣು ಹರಿಯುವ ಹಾಗೆ ಕೆಕ್ಕರಿಸಿ ನೋಡಿದರೂ ಆಗತಕ್ಕದ್ದೇನು ?” ಎಂದು ನುಡಿದು ರಣಮಸ್ತಖಾನನ ಸ್ತೋತ್ರ ಮಾಡಿದನು. ಅದನ್ನು ಕೇಳಿ ರಣ ಮಸ್ತಖಾನನು ಬಹಳ ಸಮಾಧಾನಪಟ್ಟು, ಆ ಸರದಾರರನ್ನು ಕುರಿತು-"ನಾವು ಬಾದಶಹನ ಪ್ರತಿನಿಧಿಗಳಾಗಿ ಬಂದಿರುವೆವು. ಪ್ರತ್ಯಕ್ಷ ಬಾದಶಹರು ಬಂದಾಗ ನಡಕೊಳ್ಳುವಂತೆ ನಾವು ಇಲ್ಲಿ ನಡೆಕೊಳ್ಳಬೇಕಾಗುವದು; ಮತ್ತು ವಿಜಯನಗರದ ರಾಯರು ಬಾದಶಹರಿಗೆ ಮಾನಕೊಡುವಂತೆ ನಮಗೆ ಮಾನಕೊಡಲಿಕ್ಕೇ ಬೇಕು. ಆ ರಾಮರಾಜನ ಸೊಕ್ಕು ತಲೆಗೇರಿರುವದು. ತನ್ನ ರಾಜ್ಯದ ಸುತ್ತಮುತ್ತಲಿನ ಮುಸಲ್ಮಾನ ರಾಜ್ಯಗಳನ್ನು ಮುರಿದು ಮಹಮ್ಮದ ಪೈಗಂಬರರ ನಿಶಾನಿಯು ಶೋಭಿಸುತ್ತಿದ್ದಲ್ಲಿ, ತಮ್ಮ ಹಿಂದುಗಳ ನಿಶಾನೆಯನ್ನು ಮೆರಿಸಬೇಕೆಂದು ಆತನು ಮಾಡಿರುವನು. ಒಳ್ಳೇದು ನೋಡೋಣ, ಆತನ ಇಚ್ಛೆಯು ಪೂರ್ಣವಾಗುತ್ತದೋ ನಮ್ಮ ಇಚ್ಛೆಯು ಪೂರ್ಣವಾಗುತ್ತದೋ,” ಅನ್ನಲು, ಆ ಸರದಾರನೂ “ಅಲ್ ಬತ್, ನಮ್ಮ ಇಚ್ಛೆಯೇ ಪೂರ್ಣವಾಗುವದು, ಅದರಲ್ಲಿಯೂ ಈ ಕಾರ್ಯವು ನೀವು ವಕೀಲರಾಗಿರುವಾಗಲೇ ಆಗುವದೆಂದು ನಮಗೆ ತೋರುತ್ತದೆ. ನಿಮ್ಮ ಯೋಗ್ಯತೆಯನ್ನರಿತೇ ಬಾದಶಹರು ಹಲವು ಅನುಭವಿಕರನ್ನು ಹಿಂದಕ್ಕೆ ದೂಡಿ ನಿಮ್ಮನ್ನು ಇಲ್ಲಿಗೆ ವಕೀಲರನ್ನಾಗಿ ಕಳಿಸಿರುವರು. ನಿಮ್ಮ ಮಾತನ್ನು ಬಾದಶಹರು ಅಕ್ಷರಶಃ ನಡೆಸುವರು. ಈ ಹೊತ್ತಿಗೆ ಬಾದಶಹರ ನಂಬಿಗೆಯು ನಿಮ್ಮ ಮೇಲೆ ಇದ್ದಷ್ಟು ಬೇರ ಯಾರ ಮೇಲೆಯೂ ಇರುವದಿಲ್ಲ” ಎಂದನು.

ಈ ಸ್ತುತಿಪರ ಭಾಷಣದಿಂದ ಆ ತರುಣ ರಣಮಸ್ತಖಾನನಿಗೆ ಬಹಳ