ಪುಟ:Kannadigara Karma Kathe.pdf/೧೩೯

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪ್ರಕಟಿಸಲಾಗಿದೆ
೧೨೪
ಕನ್ನಡಿಗರ ಕರ್ಮಕಥೆ
 

ನಮಗೆ ಬಹಳ ಆನಂದವಾಗಿದೆ. ಏನಾದರೂ ವಿಶೇಷತರದ ಅಪ್ಪಣೆಯಿದ್ದರೆ ತಿಳಿಸುವ ಕೃಪೆಯಾಗಬೇಕು. ಮನಸ್ಸಿನಲ್ಲಿ ಯಾವ ಪ್ರಕಾರದ ಸಂಕೋಚವನ್ನೂ ತಂದುಕೊಳ್ಳಬಾರದು, ಎಂದು ಹೇಳಿದನು. ರಣಮಸ್ತಖಾನನ ಈ ಮಾನಮರ್ಯಾದೆಯ ಹಾಗು ವಿನಯದ ಮಾತುಗಳನ್ನು ಕೇಳಿ ರಾಮರಾಜನು ಅವನನ್ನು ಕುರಿತು-” “ನೀವು ನಹಳ ಸುಜ್ಞರಿರುತ್ತೀರಿ. ತರುಣರಿದ್ದು ಬಹಳ ವಿವೇಕಿಗಳಿರುತ್ತೀರಿ, ನಿಮ್ಮನ್ನು ನೋಡಿ ನನಗೆ ಬಹಳ ಸಂತೋಷವಾಗಿರುತ್ತದೆ. ನಿನ್ನಿನ ಪ್ರಸಂಗದ ವಿಷಯವಾಗಿ ನಾನು ಮನಸ್ಸಿನಲ್ಲಿ ಏನೂ ಹಿಡಿದಿರುವದಿಲ್ಲ. ನಿಮ್ಮ ಸ್ಥಿತಿಯಲ್ಲಿ ನಾನು ಇರುತ್ತಿದ್ದರೆ, ನೀವು ಮಾಡಿದಂತೆಯೇ ನಾನು ಮಾಡುತ್ತಿದ್ದನು. ಆದ್ದರಿಂದ ನಿನ್ನಿ ನಡತೆಯ ವಿಷಯವಾಗಿ ನನ್ನಲ್ಲಿ ಸ್ವಲ್ಪವಾದರೂ ಕುಭಾವನೆಯಿರುವದಿಲ್ಲ. ತಿರುಗು ಕೇಳಿದರೆ, ನಿಮ್ಮ ತೇಜಸ್ವಿತೆಗಾಗಿ ತಾನು ನಿಮ್ಮ ಅಭಿನಂದನವನ್ನೇ ಮಾಡೇನು” ಎಂದು ನುಡಿದು, ರಾಮರಾಜನು ಕೆಲವು ವೇಳೆಯವರೆಗೆ ಸುಮ್ಮನೆ ಕುಳಿತುಕೊಂಡನು. ಆಮೇಲೆ ರಣಮಸ್ತಖಾನನನ್ನು ಕುರಿತು- “ನಾನು ನಿಮ್ಮ ಸಂಗಡ ಕೆಲವು ಏಕಾಂತದ ಮಾತುಗಳನ್ನು ಆಡಬೇಕಾಗಿದೆ, ಆದ್ದರಿಂದ ಈ ಸ್ಥಳವನ್ನಾದರೂ ನಿರ್‍ಜನವಾಗಿಮಾಡಿರಿ; ಅಥವಾ ನಾವೇ ಬೇರೆ ನಿರ್‍ಜನ ಪ್ರದೇಶಕ್ಕೆ ಹೋಗೋಣ” ಎಂದು ನುಡಿಯಲು ರಣಮಸ್ತಖಾನನು ಸ್ವಲ್ಪಹೊತ್ತು ವಿಚಾರಮಾಡಿ ತನ್ನ ಜನರ ಕಡೆಗೆ ತಿರುಗಿ- “ನೀವು ಎಲ್ಲರೂ ಇಲ್ಲಿಂದ ಹೊರಟುಹೋಗಿರಿ, ಒಬ್ಬರೂ ನನ್ನ ಹತ್ತಿರ ಇರಲಾಗದು” ಎಂದು ಆಜ್ಞಾಪಿಸಿದನು.

ರಣಮಸ್ತಖಾನನು ಹೀಗೆ ಆಜ್ಞಾಪಿಸಿದ ಕೂಡಲೆ ಎಲ್ಲ ಜನರು ಹೊರಟು ಹೋಗಹತ್ತಿದರು. ಅವರಲ್ಲಿ ಒಬ್ಬಿಬ್ಬರು ಸಂಶಯದ ಸ್ವಭಾವದರಾಗಿದ್ದರು. ಅವರ ಮನಸ್ಸಿಗೆ ಏನು ತಿಳಿಯಿತೋ ಏನೋ, ಅವರು ತಮ್ಮ ಶಸ್ತ್ರಗಳ ಮೇಲೆ ಕೈಯಿಟ್ಟುಕೊಂಡು ರಣಮಸ್ತಖಾನನನ್ನೂ, ರಾಮರಾಜನನ್ನೂ ನೋಡುತ್ತ ನಿಂತುಕೊಂಡರು. ರಾಮರಾಜನು ಇದನ್ನು ನೋಡಿ ನಗುತ್ತ ಅವರಿಗೆ-ಹೋಗಿರಿ ಹೋಗಿರಿ, ನಿಮ್ಮ ಯಜಮಾನನ ಜೀವ ಚಿಂತೆಯನ್ನು ನೀವು ಸ್ವಲ್ಪವೂ ಮಾಡಬೇಡಿರಿ. ನಾನು ಅಂಥ ದುರಾಲೋಚನೆಯಿಂದ ಇಲ್ಲಿಗೆ ಬಂದವನಲ್ಲ. ಮೇಲಾಗಿ ತಮ್ಮ ಸಂರಕ್ಷಣವನ್ನು ಮಾಡಿಕೊಳ್ಳಲಿಕ್ಕೆ ನಿಮ್ಮ ಯಜಮಾನರು ಸ್ವತಃ ಸಮರ್ಥರೇ ಇದ್ದಾರೆ, ಎಂದು ಹೇಳಿದನು. ಅದನ್ನು ಕೇಳಿ ರಣಮಸ್ತಖಾನನೂ ನಗುತ್ತ- ಎಂಥಾ ಹುಚ್ಚರಿರುವಿರೋ ನೀವು ? ಹೋಗಿರಿ ಹೋಗಿರಿ; ಏನೂ ಚಿಂತೆ ಮಾಡಬೇಡಿರಿ, ಎಂದು ಹೇಳಲು ಆ ಸೇವಕರು ಹೊರಟಹೋದರು.