ಪುಟ:Kannadigara Karma Kathe.pdf/೧೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೨೬

ಕನ್ನಡಿಗರ ಕರ್ಮಕಥೆ

೧೪ನೆಯ ಪ್ರಕರಣ

ವಿಲಕ್ಷಣ ಭಾವನೆ

ರಾಮರಾಜನಿಗೆ ಏಕಾಂತದ ಮಾತುಗಳನ್ನು ಹೇಳಲಿಕ್ಕೆ ಸಂಕೋಚವಾಗಹತ್ತಿತು. ಆತನಿಗೆ ರಣಮಸ್ತಖಾನನ್ನು ನೋಡಿ ಒಂದು ಬಗೆಯ ಸಂಶಯವು ಉತ್ಪನ್ನವಾಗಿತ್ತು. ಮೆಹೆರ್ಜಾನಳು ತನ್ನನ್ನು ಬಿಟ್ಟುಹೋದಾಗ ಗರ್ಭಿಣಿಯಿದ್ದದ್ದು ರಾಮರಾಜನಿಗೆ ಗೊತ್ತಿತ್ತು. ಆ ಮಾತಿಗೆ ಸರಾಸರಿ ೩೦-೩೫ ವರ್ಷಗಳಾಗಿದ್ದು, ರಣಮಸ್ತಖಾನನ ವಯಸೂ ಅಷ್ಟೇ ವರ್ಷದ್ದಾಗಿತ್ತು, ರಣಮಸ್ತಖಾನನ ರೂಪವು ರಾಮರಾಜನ ರೂಪವನ್ನು ಅಚ್ಚಳಿಯದೆ ಹೋಲುತ್ತಿತ್ತು ಮತ್ತು ರಣಮಸ್ತಖಾನನನ್ನು ನೋಡಿದ ಕೂಡಲೆ ರಾಮರಾಜನ ಮನಸ್ಸಿನಲ್ಲಿ ಒಂದು ಪ್ರಕಾರದ ಪ್ರೇಮವು ಸ್ವಭಾವಿಕವಾಗಿಯೇ ಉತ್ಪನ್ನವಾಗುತ್ತಿತ್ತು. ಮೇಲಾಗಿ ಮೆಹೆರ್ಜಾನಳ ಮುಖ ಮುದ್ರೆಯ ಕೆಲವು ಚಿಹ್ನೆಗಳು ರಣಮಸ್ತಖಾನನ ಮುಖದಲ್ಲಿ ತೋರುತ್ತಿದ್ದವು. ಇವೆಲ್ಲ ಲಕ್ಷಣಗಳಿಂದ ರಾಮರಾಜನು ಮನಸ್ಸಿನಲ್ಲಿ “ರಣಮಸ್ತಖಾನನು ಮೆಹರ್ಜಾನಳಲ್ಲಿ ಹುಟ್ಟಿದ ತನ್ನ ಮಗನಾಗಿರಬಹುದೋ ಎಂಬ ಸಂಶಯವು ಉತ್ಪನ್ನವಾಗುತ್ತಿತ್ತು. ನಿನ್ನೆ ರಾತ್ರಿ ಮೆಹೆರ್ಜಾನಳ ನೆನಪು ಆದಕೂಡಲೆ ಇವೆಲ್ಲ ಮಾತುಗಳು ಅವನ ಮನಸ್ಸಿನಲ್ಲಿ ಒಮ್ಮೆಲೆ ಹೊಳೆಯಲು, ಆತನು ಕುಂಜವನದಲ್ಲಿ ಮೆಹೆರ್ಜಾನಳು ಇರಬಹುದೆಂದು ಸಂಶಯದಿಂದ ತಟ್ಟನೆ ಕುಂಜವನಕ್ಕೆ ಬಂದಿದ್ದನು. ಇದೇ ವಿಷಯವಾಗಿಯೇ ಕೆಲವು ಮಾತುಗಳನ್ನು ರಣಮಸ್ತಖಾನನಿಗೆ ಏಕಾಂತದಲ್ಲಿ ಕೇಳಬೇಕೆಂದು ಆತನು ಮಾಡಿದ್ದಿನು; ಆದರೆ ಹಾಗೆ ಕೇಳಲಿಕ್ಕೆ ಪರಮಾವಧಿ ಸಂಕೋಚವಾಗಿ ಆತನು ಆ ಮಾತಿನ ಉಸಾಬರಿಯನ್ನೇ ಬಿಟ್ಟು ಸುಮ್ಮನೆ ಏನಾದರೂ ಮಾತಾಡಿ ಹೊತ್ತುಗಳೆಯುವದಕ್ಕಾಗಿ ಆತನು ರಣಮಸ್ತಖಾನನನ್ನು ಕುರಿತು-ನಾನು ಹ್ಯಾಗು ಇಂದು ಇಲ್ಲಿಗೆ ಅನಾಯಾಸವಾಗಿ ಬಂದಿದ್ದೇನೆ. ಒಮ್ಮೆ ಆ ಪುಷ್ಕರಣಿಯ ಕಡೆಗೆ ಹೋಗಿಬರೋಣ ದಂಡೆಯ ಮೇಲಿಂದ ಒಮ್ಮೆ ಅದರ ಪ್ರದಕ್ಷಿಣೆ ಹಾಕಬೇಕೆಂಬ ಇಚ್ಛೆಯು ನನಗೆ ಆಗಿರುತ್ತದೆ. ನೀವೂ ಸಂಗಡ ಬರುತ್ತಿದ್ದರೆ ಬರ್‍ರಿ, ಇಲ್ಲವೆ ನನ್ನೊಬ್ಬನನ್ನೇ ಅಲ್ಲಿಗೆ