ಪುಟ:Kannadigara Karma Kathe.pdf/೧೪೨

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪ್ರಕಟಿಸಲಾಗಿದೆ
ವಿಲಕ್ಷಣ ಭಾವನೆ
೧೨೭
 

ಹೋಗಗೊಡಿರಿ. ನಾನು ಒಮ್ಮೆ ಸತ್ತುವರಿದು ಬರುವೆನು. ಮನಸ್ಸಿಗೆ ಬಂದರೆ ಒತ್ತಟ್ಟಿಗೆ ಗಳಿಗೆರಡುಗಳಿಗೆ ಕುಳಿತು ಸ್ವಲ್ಪ ವಿಶ್ರಾಂತಿಯನ್ನು ಹೊಂದುವೆನು, ಇಲ್ಲದಿದ್ದರೆ ಬೇಗನೆ ತಿರುಗಿ ಬರುವೆನು.” ಎಂದು ನುಡಿಯಲು ರಾಮರಾಜನ ಇಂದಿನ ವಿಚಿತ್ರ ಸ್ಥಿತಿಯನ್ನು ನೋಡಿ ರಣಮಸ್ತಖಾನನಿಗೆ ಬಹಳ ಆಶ್ಚರ್ಯವಾಯಿತು. ರಾಮರಾಜನ ದಿನದ ಉದ್ದಾಮ ವೃತ್ತಿಯು ಇಂದು ಎಲ್ಲಿಯೋ ಹೋಗಿ ಬಿಟ್ಟಿತ್ತು. ಕುಂಜವನದೊಳಗೆ ಬಂದಾಗಿನಿಂದ ಈತನು ತನ್ನ ಸಂಗಡ ಇಷ್ಟು ನಮ್ರತೆಯಿಂದ ಯಾಕೆ ನಡಕ್ಕೊತ್ತಾನೆಂಬದು ರಣಮಸ್ತಖಾನನಿಗೆ ತಿಳಿಯದಾಯಿತು. ರಾಮರಾಜನ ನಡತೆಯಲ್ಲಿ ಬರಿಯ ನಮ್ರತೆಯಷ್ಟೇ ಅಲ್ಲ, ಸ್ವಲ್ಪ ಪ್ರೇಮದ ಲಕ್ಷಣವೂ ರಣಮಸ್ತಖಾನನಿಗೆ ತೋರಿತು. ಆಗ ಆ ತರುಣ ಸರದಾರನ ಮನಸ್ಸಿನಲ್ಲಿ- “ಈ ಸ್ಥಳವು ರಾಮರಾಜನದಿದ್ದು, ಈತನಿಗೆ ಒಂದು ಸಾರೆ ಪುಷ್ಕರಣಿಯ ಸುತ್ತು ತಿರುಗಿ ಬರಲಿಕ್ಕೆ ಬೇಡವೆನ್ನುವದು ಹ್ಯಾಗೆಂದು” ಯೋಚಿಸಿ. ರಾಮರಾಜನನ್ನು ಕುರಿತು-ಅಲಬತ್-ಅಲಬತ್! ತಾವು ಅವಶ್ಯವಾಗಿ ಪುಷ್ಕರಣಿಯನ್ನು ಸುತ್ತು ಹಾಕಿಕೊಂಡು ಬರಿ, ತಮ್ಮ ಮನಸ್ಸಿಗೆ ಅಲ್ಲಿ ಕೆಲವು ಹೊತ್ತು ಕುಳಿತುಕೊಳ್ಳುವ ಹಾಗಾದರೆ ಅವಶ್ಯವಾಗಿ ಕುಳಿತುಕೊಳ್ಳಿರಿ. ನೀವು ಹೀಗೆ ಸಂಕೋಚ ಪಡುವುದೇಕೆ ? ಎಂದು ಕೇಳಿದನು. ಅದಕ್ಕೆ ರಾಮರಾಜನು-ಸಂಕೋಚವೇನೂ ಇಲ್ಲ; ಆದರೆ ನೀವು ನನ್ನ ಸಂಗಡ ಬರುವ ಹಾಗಿದ್ದರೆ ಬರ್‍ರಿ, ಪುಷ್ಕರಣಿಯ ದರ್ಶನದಿಂದ ನನಗೆ ಬಹಳ ಸಮಾಧಾನವಾಗುವದು, ಆದ್ದರಿಂದ ಬರ್‍ರಿ, ಹೋಗಿ ಬರೋಣ.

ರಣಮಸ್ತಖಾನನು ರಾಮರಾಜನ ಈ ಮಾತಿಗೆ ಒಪ್ಪಿಕೊಂಡು ಆತನೊಡನೆ ಪುಷ್ಕರಣಿಯ ದಾರಿಯನ್ನು ಹಿಡಿದನು. ಬರುತ್ತ ಬರುತ್ತ ಅವರಿಬ್ಬರು ಪುಷ್ಕರಣಿಯ ದಂಡೆಯನ್ನು ಮುಟ್ಟಿದರು. ಅಲ್ಲಿ ಹೋದ ಕೂಡಲೆ ರಾಮರಾಜನಿಗೆ ಹಿಂದಿನದೆಲ್ಲ ನೆನಪಾಗಿ, ಮೆಹೆರ್ಜಾನಳು ಆತನ ಕಣ್ಣಿಗೆ ಕಟ್ಟಿದಳು. ಪುಷ್ಕರಣಿಯ ದಂಡೆಯ ಮೇಲೆ ನಿಂತುಕೊಂಡು ಆತನು ಸುತ್ತು ಮುತ್ತು ನೋಡಹತ್ತಿದನು. ಹಿಂದಕ್ಕೆ ೩೫ ವರ್ಷಗಳ ಹಿಂದೆ ಇದ್ದಂತೆಯೇ ಪುಷ್ಕರಣಿಯ ಸೌಂದರ್ಯವು ಈಗಾದರೂ ಇತ್ತು. ತನ್ನ ಸಂಗಡ ರಣಮಸ್ತಖಾನನು ಇರುವನೆಂಬದನ್ನು ರಾಮರಾಜನು ಮರೆತು ಬಿಟ್ಟಂತೆ ತೋರಿತು. ಆತನಿಗೆ ಪುಷ್ಕರಣಿಯ ಹೊರತು ಬೇರೆಯೇನೂ ಕಾಣುತ್ತಿದ್ದಿಲ್ಲ. ಅವನು ಪುಷ್ಕರಣಿಯ ಸುತ್ತು ಮುತ್ತು ನೋಡಿದನು, ಕೆಳಗೆ ಕಮಲಮಯವಾದ ಜಲದ ಕಡೆಗೆ ನೋಡಿದನು, ಆಮೇಲೆ ಆಕಾಶದ ಕಡೆಗೆ ನೋಡಿ ಒಮ್ಮೆ ಗಟ್ಟಿಯಾಗಿ ನಿಟ್ಟುಸಿರುಬಿಟ್ಟನು. ಅಷ್ಟರಲ್ಲಿ ಒಂದು ಮಗ್ಗಲಿಗೆ