ಪುಟ:Kannadigara Karma Kathe.pdf/೧೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೩೪

ಕನ್ನಡಿಗರ ಕರ್ಮಕಥೆ

ಹಾಗೆಯೇ ಆಯಿತು. ರಣಮಸ್ತಖಾನನ ಕಣ್ಣಿಗೆ ಆಕೆಯ ಸ್ವರೂಪ ಸೌಂದರ್ಯದಲ್ಲಿ ಏನು ಕೊರತೆಯು ಕಂಡು ಬರಲಿಲ್ಲ. ತನ್ನನ್ನು ಒತ್ತಾಯದಿಂದ ಇಲ್ಲಿ ಇಟ್ಟುಕೊಂಡಿರುವರೆಂಬ ಕಲ್ಪನೆಯಿಂದ ಈಕೆಯು ಇಷ್ಟು ಶೋಕಾಕುಲಳಾಗಿದ್ದರೆ, ಈಕೆಯನ್ನು ಇಂದೇ ಊರಿಗೆ ಕಳಿಸಿ ಕೊಡಬೇಕೆಂದು ರಣಮಸ್ತಖಾನನು ಯೋಚಿಸಿ, ಧೈರ್ಯದಿಂದ ಆಕೆಯನ್ನು ಕುರಿತು- “ನಾನು ಪಂಜರದಲ್ಲಿ ಸಿಕ್ಕುಬಿದ್ದೆನು, ಇಲ್ಲಿಂದ ಹಾರಿಹೋಗಬೇಕೆಂಬ ಇಚ್ಛೆಯು ಅರಗಿಳಿಗೆ ಆಗಿರುವದೇನು ? ಯಾಕೆ, ಮೌನವೇಕೆ ? ಅರಗಿಳಿಯು ಯಾಕೆ ಮಾತಾಡುವದಿಲ್ಲ? ನಾನು ಪಂಜರದಲ್ಲಿರುತ್ತೇನೆಂದು ಅರಗಿಳಿಯು ತಿಳಿಯಬಾರದು. ಹಾರಿಹೋಗುವ ಇಚ್ಛೆಯಾದ ಕೂಡಲೆ ಅದು ಹಾರಿ ಹೋಗಬಹುದು.”

ಈ ಅತ್ಯಂತ ಪ್ರೇಮಯುಕ್ತ ಭಾಷಣದಿಂದ ಧೈರ್ಯ ಬಂದದ್ದರಿಂದಲೋ ಏನೋ ನೂರಜಹಾನಳು ರಣಮಸ್ತಖಾನನ ಕುರಿತು- “ನಿಮ್ಮ ಮನೆಯ ಕುಂಭಗಳ ಮೇಲೆ ಕುಳಿತುಕೊಳ್ಳುವ ಕ್ಷುದ್ರ ಪಕ್ಷಿಗಳ ಯೋಗ್ಯತೆಯೂ ನನಗೆ ಇಲ್ಲದಿರಲು, ನನಗೆ ಅರಗಿಳಿಯಂಥ ಸುಂದರ ಪಕ್ಷಿಯ ಹೆಸರು ಕೊಡುವದೇಕೆ ? ಅರಗಿಳಿಯ ಯಾವ ಯೋಗ್ಯತೆಯನ್ನು ನನ್ನಲ್ಲಿ ನೋಡಿದಿರಿ ?” ಎಂದು ಮಾತಾಡಲು, ಆಕೆಯ ಈ ಅತ್ಯಂತ ಮಧುರ ಸ್ವರಯುಕ್ತ ವಿನಯವಾಣಿಯನ್ನು ಕೇಳಿ, ಆನಂದದಿಂದ ರಣಮಸ್ತಖಾನನ ಮೈಮೇಲಿನ ಕೂದಲುಗಳು ನೆಟ್ಟಗಾದವು. ತನ್ನ ಮಾತುಗಳಿಗೆ ಈಕೆಯು ಉತ್ತರವನ್ನು ಕೊಟ್ಟಾಳೋ ಎಂದು ಆತುರದಿಂದ ಆತನು ಎದುರು ನೋಡುತ್ತಿರುವಾಗ, ಆ ಸುಂದರಿಯು ಹೀಗೆ ಮಂಜುಳಸ್ವರದಿಂದ ನುಡಿದದ್ದನ್ನು ಕೇಳಿ ಖಾನನು ಅತ್ಯಾನಂದಿಂದ- “ನಾನು ಕೊಟ್ಟ ಹೆಸರು ನಿಮ್ಮ ಯೋಗ್ಯತೆಗೆ ತಕ್ಕದ್ದಲ್ಲ. ಬೇರೆ ಸುಂದರವಾದ ಹೆಸರು ಗೊತ್ತಾಗದ್ದರಿಂದ ಅದನ್ನೇ ನಾನು ನಿಮಗೆ ಕೊಟ್ಟೆನು; ಆದರೆ ನಿನ್ನೆ ನನಗೆ ಕೊಟ್ಟಿರುವ 'ನವಾಬ' ಎಂಬ ಹೆಸರು ಮಾತ್ರ ನಿಶ್ಚಯವಾಗಿ ನನ್ನ ಯೋಗ್ಯತೆಯನ್ನು ಮೀರಿದ್ದಿರುತ್ತದೆ, ಅದರೆ ಇಂಥ ಗೌರವದ ಹೆಸರನ್ನು ನನಗೆ ಕೊಡುವ ಕಾರಣವೇನು ? ಎಂದು ಕೇಳಲು ಆತನ ಮಾತುಗಳಿಂದ ನೂರಜಹಾನಳ ಅಂಜಿಕೆಯು ಮತ್ತಷ್ಟು ದೂರವಾಗಿ, ಅಕೆಯು ರಣಮಸ್ತಖಾನನನ್ನು ಕುರಿತು-ಅದಕ್ಕೂ ಯೋಗ್ಯವಾದ ಹೆಸರು ನೆನಪಾಗದ್ದರಿಂದಲೇ ಆಗ ಆ ಹೆಸರನ್ನು ತಮಗೆ ನಾನು ಕೊಟ್ಟೆನು, ಅದರಿಂದ ತಮಗೆ ಸಿಟ್ಟು ಬಂದಿದ್ದರೆ, ನಾನು ಕ್ಷಮೆಯನ್ನು ಯಾಚಿಸುತ್ತೇನೆ; ಆದರೆ ...........

ಈ ಮೇರೆಗೆ ನುಡಿದು ಅಷ್ಟಕ್ಕೆ ನೂರಜಹಾನಳು ಸುಮ್ಮನಾದಳು, ಮುಂದೆ ಆಡಬೇಕೆಂದಿದ್ದ ಮಾತುಗಳನ್ನು ಆಕೆಯು ನುಂಗಿಕೊಂಡಳು. ಅದನ್ನು ನೋಡಿ