ನೂರಜಹಾನ- ನಾನು ಇಂದಿನಿಂದ ಸ್ವತಂತ್ರಳಾದೆನೆಂದು ಹೇಳಿದೆನಲ್ಲ? ಅದು ಎಷ್ಟು ಮಾತ್ರವೂ ನಿಜವಲ್ಲ.
ಇದನ್ನು ಕೇಳಿದ ಕೂಡಲೆ ರಣಮಸ್ತಖಾನನು ಏನೆ ಮಾತಾಡಬೇಕೆನ್ನುತ್ತಿರಲು, ನೂರಜಹಾನಳು ಪುನಃ ಕೈಯಿಂದ ಸಂಜ್ಞೆಮಾಡಿ ಸುಮ್ಮನಿರಿಸಿ- “ಇನ್ನು ನನ್ನ ಮಾತುಗಳನ್ನು ಕೇಳಿಕೊಳ್ಳಿರಿ,” ಎಂದು ಹೇಳಿದನು. ಅದಕ್ಕೆ ರಣಮಸ್ತಖಾನನು-ನಿನ್ನ ಮಾತುಗಳನ್ನೆಲ್ಲ ನಾನು ಕೇಳಿಕೊಳ್ಳುವದು ಆಶ್ಚರ್ಯವಲ್ಲ, ನೀನು ಯಾವಾಗಲು ನನ್ನ ಸಂಗಡ ಮಾತಾಡುತ್ತಲೇ ಇರಬೇಕೆಂದು ನನ್ನ ಉತ್ಕಟೇಚ್ಛೆಯಿರುತ್ತದೆ. ಅಮೃತವೃಷ್ಟಿಯಾಗುತ್ತಿರಲು, ಅದು ಮೈಮೇಲೆ ಬೀಳಬಾರದೆಂದು ಯಾರಾದರೂ ಇಚ್ಚಿಸಬಹುದೋ ? ಆದರೆ ವೃಷ್ಟಿಯಾಗುವ ಮೊದಲು ಅದು ಅಮೃತದ್ದೋ ವಿಷದೋ ಎಂಬುದು ಗೊತ್ತಾದರೆ ನೆಟ್ಟಗೆ ! ಒಂದು ಬಿಂದುವು ಮೊದಲೂ ನನ್ನ ಕಿವಿಯಲ್ಲಿ ಬೀಳಲಿ. ಅದು ಅಮೃತದ್ದೇ ಎಂಬುದು ನನ್ನ ಮನಸ್ಸಿಗೆ ಗೊತ್ತಾಗಲಿ, ಆಮೇಲೆ ನಾನಾಗಿಯೇ ಆ ದೃಷ್ಟಿಯಲ್ಲಿ ತಪ್ಪನೆ ತೋಯಿಸಿಕೊಳ್ಳಲಿಕ್ಕೆ ಸಿದ್ಧನಾಗುವೆನು. ಒಂದೇ ಮಾತು-ನಾನು ನಿನ್ನವನೋ, ನಿನ್ನವನಲ್ಲವೋ ? ಹೇಳು ಎಂದು ಕೇಳಲು, ನೂರಜಹಾನಳು ನಕ್ಕು-ಮೊದಲೂ ನನ್ನ ಮಾತುಗಳನ್ನೆಲ್ಲ ಸಮಾಧಾನದಿಂದ ಕೇಳಿಕೊಳ್ಳಿರಿ; ಅಂದರೆ ಎಲ್ಲ ನಿಮಗೆ ಗೊತ್ತಾಗುವದು. ಎಂದು ಹೇಳಿದಳು. ಇಷ್ಟು ಮಾತಾಡುವದರೊಳಗೆ ಆಕೆಯ ಸುಂದರಮುಖದಲ್ಲಿಯ ನಗೆಯು ಅಡಗಿ, ಆ ಮುಖವು ಬಹಳ ಗಂಭೀರವಾಯಿತು. ಬರಿಯ ಗಾಂಭೀರವಷ್ಟೇ ಅಲ್ಲ, ಬರಬರುತ್ತ ಆ ಮುಖದ ಗಾಂಭೀರ್ಯದಲ್ಲಿ ಸಂತಾಪಯುಕ್ತ ಖೇದದ ಮಿಶ್ರಣವಾದಂತೆ ತೋರಹತ್ತಿತು. ಆಕೆಯ ವಿಸ್ತೀರ್ಣವಾದ ಬಾಲಪ್ರದೇಶದಲ್ಲಿ ನಿರಿಗೆಗಳು ತೋರಹತ್ತಿದವು. ಆಕೆಯ ಹುಬ್ಬುಗಳು ಅಕುಂಚಿತವಾದದ್ದರಿಂದ, ಆಕೆಯ ವಿಶಾಲ ನೇತ್ರಗಳೂ ಅಕುಂಚಿತವಾಗಿ ಉಗ್ರವಾದವು. ಆಕೆಯ ಮುಖದಲ್ಲಿ ನಿಶ್ಚಯದ ಚಿಹ್ನವು ತೋರಹತ್ತಿತು. ಇದನ್ನೆಲ್ಲ ನೋಡಿ ರಣಮಸ್ತಖಾನನು ಬೆರಗಾದನು, ಒಮ್ಮಿಂದೊಮ್ಮೆ ಆದ ಈ ರೂಪಾಂತರವು ತನ್ನ ಅಶಾತಂತುವು ಹರಿದುಹೋಗುವದಕ್ಕೆ ಕಾರಣವಾಯಿತೆಂದು ಅವನು ತಿಳಿದುಕೊಂಡನು. ಆತನು ಏನೋ ಮಾತಾಡಬೇಕೆಂದು ತುಟಿಯನ್ನು ಅಲ್ಲಾಡಿಸುತ್ತಿರಲು, ಪುನಃ ನೂರಜಹಾನಳು ಸಂಜ್ಞೆಮಾಡಿ ಸುಮ್ಮನಿರಿಸಿ ಕೂಡಲೆ ಮಾತಾಡಹತ್ತಿದಳು-
ನವಾಬಸಾಹೇಬರೇ, ನಾನು ಒಬ್ಬ ಯಃಕಶ್ಚಿತ ಮನುಷ್ಯನ ಮಗಳಿರುವೆನು. ಯಾವನೊಬ್ಬ ಬಾದಶಹನ ಮಗಳಲ್ಲ, ಸ್ವರ್ಗದೊಳಗಿನ ದೇವತೆಯಲ್ಲ; ಆದರೆ