ವಿಷಯಕ್ಕೆ ಹೋಗು

ಪುಟ:Kannadigara Karma Kathe.pdf/೧೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಸಂಬಂಧ ಸೂಚನೆ
೧೪೭

“ವಕೀಲರು ವಿಜಾಪುರಕ್ಕೆ ಹೋಗುವದರ ಪರಿಣಾಮವು ನೆಟ್ಟಗಾಗಲಿಕ್ಕಿಲ್ಲ. ಬೇಗನೆ ಯುದ್ಧವು ಆರಂಭವಾಗಬಹುದಾಗಿ ತೋರುತ್ತದೆ” ಎಂದು ಅವರು ಮಾತಾಡುತ್ತಿರುವರು. ಹೀಗೆ ಆ ಜನರು ಆಡಿದ್ದನ್ನು ನಾನು ಕಿವಿಮುಟ್ಟಿ ಕೇಳಿದೆನಾದ್ದರಿಂದಲೇ ಇದಿಷ್ಟು ಸಂಗತಿಯನ್ನು ಮಹಾರಾಜರ ಕಿವಿಯ ಮೇಲೆ ಹಾಕಬೇಕೆಂದು ಬಂದೆನು.” ಎಂದು ಹೇಳಲು ರಾಮರಾಜನು ವಿಚಾರಮಗ್ನನಾದನು. ಕೆಲಹೊತ್ತಿನ ಮೇಲೆ ಅತನು ತನ್ನೊಳಗೆ- “ಅದರ ಹೊರತು ಎರಡನೆಯ ಮಾರ್ಗವಿಲ್ಲ” ಎಂದು ನುಡಿದು, ಚಾರನನ್ನು ಕುರಿತು “ನಾನು ನಿನ್ನ ಸಹಾಯಕ್ಕಾಗಿ ಏಳೆಂಟು ಜನರನ್ನು ಕೊಡುತ್ತೇನೆ. ಏನಾದರೂ ಹಂಚಿಕೆಮಾಡಿ ನೀವು ಅ ಬಲಭಿಮನನ್ನು ನನ್ನ ಕಡೆಗೆ ಕರಕೊಂಡು ಬರ‍್ರಿ. ನಾನು ಕರೆದಿರುತ್ತೇನೆಂದು ಮೊದಲು ಸಾಮೋಪಚಾರದಿಂದ ಆತನಿಗೆ ಹೇಳಿರಿ. ಅವನು ಬಂದರೆ ಒಳಿತಾಯಿತು. ಇಲ್ಲದಿದ್ದರೆ ಹ್ಯಾಗಾದರೂ ಮಾಡಿ ಅವನನ್ನು ಎಳಕೊಂಡು ಬರ‍್ರಿ. ಮುಖ್ಯ ಮಾತು. ಅವನನ್ನು ಕರಕೊಂಡು ಬರ‍್ರಿ, ಬಿಟ್ಟುಬರಬೇಡರಿ” ಎಂದು ನಿರ್ಧಾರದಿಂದ ಹೇಳಿ, ಸಹಾಯಕ್ಕೆ ಕೊಡತಕ್ಕ ಜನರನ್ನು ಕೊಟ್ಟನು. ಆ ಕರಿಯ ಮನುಷ್ಯನು ಧನಮಲ್ಲನೇ ಎಂದು ರಾಮರಾಜನು ನಿಶ್ಚಯವಾಗಿ ತಿಳಿದಿದ್ದನು. ಆತನನ್ನು ಹಿಡಿಕೊಂಡು ಬಂದರೆ; ಮೆಹೆರ್ಜಾನಳ ವೃತ್ತಾಂತವು ತಿಳಿಯುವದೆಂದು ಆತನು ನಂಬಿದ್ದನು. ರಣಮಸ್ತಖಾನನು ತನ್ನ ಮಗನೂ ಆತನ ತಾಯಿಯು ಮೆಹೆರ್ಜಾನಳೂ ಆಗಿರಬಹುದೆಂದು ರಾಮರಾಜನ ಸಂಶಯವು ಇಂದಿನ ಚಾರನ ಮಾತಿನಿಂದ ಮತ್ತಷ್ಟು ದೃಢವಾಯಿತು. ಈ ಸಂಶಯದ ದೃಢೀಕರಣದಿಂದ ಆತನಿಗೆ ಸಮಾಧಾನವಾಗಲಿಲ್ಲ. ಆ ಸ್ತ್ರೀಯು ಮೆಹೆರ್ಜಾನಳೇ ಎಂಬುದು ನಿಸ್ಸಂಶಯವಾಗಿ ತನಗೆ ಗೊತ್ತಾಗಬೇಕೆಂದು ಆತನು ಆತುರ ಪಡುತ್ತಿದ್ದನು. ಮೆಹೆರ್ಜಾನಳೇ ಎಂಬುದು ತನಗೆ ಗೊತ್ತಾದ ಬಳಿಕ, ತಾನು ಆಕೆಯನ್ನು ಕಂಡು ಯಾವತ್ತೂ ಸಂಗತಿಯನ್ನು ಕೇಳಿಕೊಳ್ಳಬೇಕೆಂದು ಆತನು ಮಾಡಿದ್ದನು. ತನ್ನನ್ನು ಬಿಟ್ಟುಹೋದ ಬಗ್ಗೆ ಆಕೆಗೆ ಪಶ್ಚಾತ್ತಾಪವಾಗಿರಬಹುದೋ ? ಹಾಗೆ ಪಶ್ಚಾತ್ತಾಪವಾಗಿರದಿದ್ದರೆ ಆಕೆಯು ಮಗನನ್ನು ಕಟ್ಟಿಕೊಂಡು ಇಲ್ಲಿಗೆ ಯಾಕೆ ಬಂದಳು ? ಪಶ್ಚಾತ್ತಾಪವೇ ಆಗಿದ್ದ ಪಕ್ಷದಲ್ಲಿ ನಮ್ಮಿಬ್ಬರ ಸಂಬಂಧವು ಮೊದಲಿನಂತೆ ಯಾಕೆ ಕೂಡಲಿಕ್ಕಿಲ್ಲ ? ಎಂಬಿವೇ ಮೊದಲಾದ ವಿಚಾರಗಳು ರಾಮರಾಜನ ಮನಸ್ಸಿನಲ್ಲಿ ಉತ್ಪನ್ನವಾದವು. ರಣಮಸ್ತಖಾನನನ್ನು ನೋಡಿ ಈವರೆಗೆ ರಾಮರಾಜನಿಗೆ ಕೌತುಕವಷ್ಟೇ ಆಗುತ್ತಿತ್ತು. ಇಂದು ಆ ಕೌತುಕವು ಪುತ್ರಪ್ರೇಮ, ಪುತ್ರವಾತ್ಸಲ್ಯಗಳ ರೂಪವನ್ನು ಧರಿಸಿತು.