ಇತ್ತ ಆ ತರುಣಿಯು ಕುರಿಯು ಹಾಗೂ ಕುರಿಮರಿಗಳ ಪ್ರೇಮದ ಪ್ರಭಾವವನ್ನು ಕೌತುಕದಿಂದ ನೋಡುತ್ತ, ಅವುಗಳ ಬಳಿಗೆ ಬಂದು, ಆ ಕುರಿಯನ್ನು ಕುರಿತು ಉರ್ದು ಭಾಷೆಯಿಂದ-ಯಾವ ದುಷ್ಟನು ನಿನ್ನನ್ನು ಕಟ್ಟಿದ್ದಾನೆ ! ನಿಲ್ಲು ನಾನು ನಿನ್ನನ್ನು ಈಗ ಬಿಚ್ಚಿಬಿಡುತ್ತೇನೆ ಎಂದು ನುಡಿಯುತ್ತ ಕುರಿಯ ಕೊರಳ ಹಗ್ಗವನ್ನು ಬಿಚ್ಚಿ ಹೋದಳು. ಆಕೆಯ ಪ್ರಯತ್ನಕ್ಕೆ ಪ್ರತಿಬಂಧ ಮಾಡುವದೊತ್ತಟ್ಟಿಗೇ ಉಳಿದು, ರಾಮರಾಜನು ಆಕೆಯ ಚಲನವಲನವನ್ನೂ, ಲಲಿತವಾದ ಮನೋಹರ ಹಾವಭಾವವನ್ನೂ ನೋಡುವುದರಲ್ಲಿ ಮಗ್ನನಾಗಿ ಹೋದನು. ಆತನು ಹೀಗೆಯೇ ಎಷ್ಟು ಹೊತ್ತು ಮಗ್ನನಾಗಿರುತ್ತಿದ್ದನೋ ತಿಳಿಯದು. ಆದರೆ ಆತನನ್ನು ಎಚ್ಚರಗೊಳಿಸುವಂಥ ಒಂದು ಭಯಂಕರ ಪ್ರಸಂಗವು ಅಕಸ್ಮಾತ್ತಾಗಿ ಒದಗಿ, ಆತನ ಚಿತ್ತವು ಚಂಚಲವಾಯಿತು. ಕುರಿಯನ್ನು ಗಿಡಕ್ಕೆ ಕಟ್ಟಿಹೋದ ಕುರುಬನು ಗುಲ್ಲುಮಾಡಿ ಎಬ್ಬಿಸಿದ್ದರಿಂದಲೋ ಕುರಿಯ ವಾಸನೆಯಿಂದಲೋ, ಬೇರೆ ಯಾವ ಕಾರಣದಿಂದಲೋ ಆ ಭಯಂಕರವಾದ ಹುಲಿಯು ಗುರುಗುಟುತ್ತ ಎದ್ದಿತು. ಅದರ ಗುರುಗುಟ್ಟುವ ಧ್ವನಿಯು ರಾಮರಾಜನಿಗೆ ಸ್ಪಷ್ಟವಾಗಿ ಕೇಳಿಸಹತ್ತಿತು. ಇನ್ನು ಈ ಹುಲಿಯು ಇತ್ತ ಕಡೆಗೆ ಬಂದು, ಕುರಿಯ ಮೇಲಾಗಲಿ ಸುಂದರಿಯ ಮೇಲಾಗಲಿ, ಹಾರಿ, ಪ್ರಾಣಹರಣ ಮಾಡುವದೆಂದು ರಾಮರಾಜನು ತಿಳಿದನು. ಆ ತರುಣಿಯೊಬ್ಬಳು ಅಲ್ಲಿ ಇರದಿದ್ದರೆ, ಆತನಿಗೆ ಯಾತರ ಚಿಂತೆಯೂ ಇದ್ದಿಲ್ಲ. ಆತನು ಒಂದು ಕ್ಷಣದಲ್ಲಿ ಗುಂಡುಹಾಕಿ ಹುಲಿಯನ್ನು ಕೊಲ್ಲುತ್ತಿದ್ದನು. ಆದರೆ ಈಗ ಹಾಗೆ ಮಾಡುವ ಹಾಗಿದ್ದಿಲ್ಲ. ಕುರಿಯ ಬಳಿಯಲ್ಲಿ ನಿಂತಿದ್ದ ಸುಂದರಿಯನ್ನು ಬೆನ್ನಿಗೆ ಹಾಕಿಕೊಂಡು ಹುಲಿಗೆ ಎದುರಾಗಿ ನಿಂತು ಅದನ್ನು ಆತನು ಕೊಲ್ಲದಿದ್ದರೆ, ಆಕೆಯ ಪ್ರಾಣ ರಕ್ಷಣವಾಗುವಂತೆ ಇದ್ದಿಲ್ಲ. ಆದ್ದರಿಂದ ಮಹಾಸಾಹಸಿಯಾದ ರಾಮರಾಜನು ತುಬಾಕಿಯನ್ನು ಜೋಕೆಯಿಂದ ಹಿಡಿದು ಗಿಡದ ಮೇಲಿಂದ ಕೆಳಗೆ ದುಮುಕಿದನು. ಅಷ್ಟರಲ್ಲಿ ಹುಲಿಯು ಕುರಿಯನ್ನು ಹಿಡಿದಿತ್ತು. ಇನ್ನು ಗುಂಡು ಹಾಕುವದು ಅವಶ್ಯಕವಾಗಿ ತೋರಲು ರಾಮರಾಜನು ತುಬಾಕಿಯನ್ನು ಬಿಸುಟು, ಟೊಂಕದಲ್ಲಿ ಅಲೆದಾಡುತ್ತಿದ್ದ ಕಠಾರಿಯನ್ನು ಕೈಯಲ್ಲಿ ತಕ್ಕೊಂಡು ಹುಲಿಯ ಹೊಟ್ಟೆಯ ಬುಡದಲ್ಲಿ ಸೇರಿಸಿದನು. ಹುಲಿಯ ಬಾಯಲ್ಲಿ ಕುರಿಯಿದ್ದದ್ದರಿಂದಾಗಲಿ, ಬೇರೆ ಯಾವ ಕಾರಣದಿಂದೇ ಆಗಲಿ, ಅದರ ಆಯಕಟ್ಟಿನ ಸ್ಥಳ ನೋಡಿ ಒಂದೇ ಸಮನೆ ಕಠಾರಿಯಿಂದ ಇರಿಯಲಿಕ್ಕೆ ಆತನಿಗೆ ಅನುಕೂಲವಾಯಿತು. ಹುಲಿಯು ಬಾಯೊಳಗಿನ ಕುರಿಯನ್ನು ಚೆಲ್ಲಿಕೊಟ್ಟು, ರಾಮರಾಜನನ್ನು ಹಿಡಿಯಲು ಹಾತೊರೆಯಿತು. ಹೀಗೆ ಒಂದೇ ಸಮನೆ ಅವರಿಬ್ಬರ
ಪುಟ:Kannadigara Karma Kathe.pdf/೨೦
ಗೋಚರ
ಈ ಪುಟವನ್ನು ಪ್ರಕಟಿಸಲಾಗಿದೆ
ವಿನಾಶಾಂಕುರ
೫