ಪುಟ:Kannadigara Karma Kathe.pdf/೩೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೯೨

ಕನ್ನಡಿಗರ ಕರ್ಮಕಥೆ

ಈ ಮೇರೆಗೆ ರಾಮರಾಜನು ತನ್ನ ಸೈನ್ಯದ ಸಿದ್ಧತೆಯನ್ನು ಮಾಡಿಕೊಂಡು ಕುಳಿತುಕೊಂಡನು. ಆತನಿಗೆ ತನ್ನ ಸೈನ್ಯದಲ್ಲಿ ಯಾವ ಪ್ರಕಾರದ ದೋಷವೂ ಕಂಡುಬರಲಿಲ್ಲ. ತನ್ನ ಸೈನ್ಯದ ಸಿದ್ಧತೆಯ ಅಭಿಮಾನವು ತಲೆಗೇರಿದ್ದರಿಂದ ಶತ್ರುಬಲದ ಕಲ್ಪನೆಯು ಕೂಡ ಆತನ ಮನಸ್ಸಿಗೆ ಹೊಳೆಯಲಿಲ್ಲ. ಹ್ಯಾಗೂ ತಿರುಮಲ-ವೆಂಕಟಾದ್ರಿಗಳನ್ನು ಕರೆಕಳುಹಿಸಿರುವೆನೆಂದು ಆತನು ಭಾವಿಸಿ, ನಿಶ್ಚಿಂತನಾಗಿದ್ದನು. ಅಷ್ಟರಲ್ಲಿ ಶತ್ರುಸೈನ್ಯವು ತಾವು ಬೀಡುಬಿಟ್ಟುಕೊಂಡು ಕುಳಿತ ಸ್ಥಳದಿಂದ ಸುಮಾರು ಮೂರು ಹರದಾರಿ ಮುಂದಕ್ಕೆ ಸಾಗಿ ಬಂದಿತೆಂಬ ವರ್ತಮಾನವನ್ನು ಚಾರರು ರಾಯನಿಗೆ ಹೇಳಿದರು, ಅದನ್ನು ಕೇಳಿ ರಾಮರಾಯನ ಒಂದು ಭ್ರಾಂತಿಯು ದೂರವಾಗಿ, ಆತನು ಸ್ವಲ್ಪ ಕಣ್ಣು ತೆರೆದನು, ತಿರುಮಲವೆಂಕಟಾದ್ರಿಗಳಿಂದ ಪೆಟ್ಟು ತಿಂದು ಮುಸಲ್ಮಾನ ಸೈನ್ಯವು ಓಡಿಬಂದಿಲ್ಲೆಂಬದು ಈಗ ಆತನಿಗೆ ಗೊತ್ತಾಯಿತು. ಈ ಪ್ರಸಂಗದಲ್ಲಿ ಶತ್ರುಗಳು ಮುಂದಕ್ಕೆ ಸಾಗಿಬರುವ ಹಾದಿಯನ್ನು ನೋಡುತ್ತ ಕುಳಿತುಕೊಳ್ಳದೆ, ತಾನು ಮುಂದಕ್ಕೆ ಸಾಗಿಹೋಗಬೇಕೆಂದು ರಾಮರಾಜನು ಯೋಚಿಸಿದನು. ಈಗ ರಾಮರಾಜನ ಸೈನ್ಯವು ಮುದ್ಗಲ್ಲಕೋಟೆಯ ಬಳಿಯಲ್ಲಿ ಇತ್ತು, ಶತ್ರುಸೈನ್ಯವು ತನ್ನ ಬಂಧುಗಳ ಕಣ್ಣುತಪ್ಪಿಸಿ ತಿರುಗಿ ಬಂದು ತನ್ನನ್ನು ಗಂಟುಬಿದ್ದಿತೆಂದು ಆತನು ತಿಳಿದನು, ಆದರೆ ಆತನು ಎದೆಗುಂದಲಿಲ್ಲ. ತನ್ನ ಸೈನ್ಯವು ಒಟ್ಟುಗೂಡಿದ ನಾಲ್ವರು ಬಾದಶಹರು ಸೈನ್ಯಕ್ಕೂ ಎದುರಾಗಲು ಸಮರ್ಥವಾಗಿರುತ್ತದೆಂಬ ನಂಬಿಗೆಯು ಆತನಿಗೆ ಸಂಪೂರ್ಣವಾಗಿ ಇತ್ತು ! ಅಂದಬಳಿಕ ಕೇಳುವದೇನು ? ಆತನು ಕೂಡಲೆ ತನ್ನ ಸೈನ್ಯಕ್ಕೆ ಮುಂದಕ್ಕೆ ಸಾಗಲು ಆಜ್ಞಾಪಿಸಿದನು. ಆಗ ಆತನ ನಿಜವಾದ ಹಿತಕಚಿಂತರು ಆತನಿಗೆ-“ಮಹಾರಾಜ, ತಮಗೆ ತಿರುಮಲ-ವೆಂಕಟಾದ್ರಿಗಳ ಬೆಂಬಲವಿಲ್ಲ. ಅವರನ್ನು ಕರೆಯಕಳುಹಿಸಿ, ಅವರು ಬಂದಬಳಿಕ ತಾವು ಮುಂದಕ್ಕೆ ಸಾಗಿಹೋಗತಕ್ಕದ್ದು. ಇಲ್ಲದಿದ್ರೆ ಶತ್ರುಗಳು ತಾವಾಗಿ ನಮ್ಮ ಮೈಮೆಲೆ ಸಾಗಿ ಬಂದಬಳಿಕ ನಿರ್ವಾಹವಿಲ್ಲದೆ ಏನು ಮಾಡುವದನ್ನು ಮಾಡಬೇಕು, ಈಗ ನಾವು ಮದ್ದಲ್ಲ ಕೋಟೆಯ ಆಶ್ರಯದಲ್ಲಿರುವೆವು. ಆ ಆಸರವನ್ನು ಬಿಟ್ಟು ಮುಂದಕ್ಕೆ ಹೋಗುವ ಸಾಹಸವನ್ನು ಮಾಡಬಾರದು” ಎಂದು ಹೇಳಿದರು. ಆದರೆ ರಾಮರಾಜನಿಗೆ ಅವರ ಮಾತುಗಳು ಎಷ್ಟುಮಾತ್ರವೂ ಸೇರಲಿಲ್ಲ. ನಾನು ಈಗ ಯೋಚಿಸಿರುವದೇ ಯೋಗ್ಯವಾಗಿರುತ್ತದೆ. ನಾನು ಮುಂದಕ್ಕೆ ಸಾಗಿ ಹೋಗದಿದ್ದರೆ, ನನ್ನ ಅಂಜುಬುರುಕತನವು ವ್ಯಕ್ತವಾಗುವದು. ಈಗ ಅಂಜಲಿಕ್ಕೆ ಅಂಥ ಪ್ರಸಂಗವೇನು ಬಂದಿರುವದಿಲ್ಲ. ಸುಮ್ಮನೆ ಯಾಕೆ ಅಂಜಬೇಕು ? ನಾವು ಮುಂದಕ್ಕೆ ಸಾಗಿಹೋಗಿ ಶತ್ರುಗಳು ಎದುರಾದಕೂಡಲೆ