ವ್ಯರ್ಥವಾಗುವದೆಂಬ ವಿಚಾರದಿಂದ ಆ ತರುಣವೀರನು ಭಯಭೀತನಾದನು : ಆದರೂ ಆತನು ಅದನ್ನೇನು ಹೊರಗೆ ತೋರಗೊಡದೆ ಮೆಹರ್ಜಾನಳನ್ನು ಕುರಿತು-
ರಾಮರಾಜ-ಶಾಬಾಸ್ ! ನಿನ್ನ ಇಚ್ಛೆಯು ವಿಲಕ್ಷಣವಾದದ್ದೆಂಬುದರಲ್ಲೇನೂ ಸಂಶಯವಿಲ್ಲ; ಆದರೆ ಅದು ಪೂರ್ಣವಾಗಲಿಕ್ಕೆ ದೊಡ್ಡದೊಂದು ಪ್ರತಿಬಂಧವಿರುತ್ತದಲ್ಲ ! ಆ ಪ್ರತಿಬಂಧವು ಹ್ಯಾಗೆ ದೂರವಾಗಬೇಕು ?
ಮೆಹರ್ಜಾನ-ಅದೇನು ಪ್ರತಿಬಂಧ ?
ರಾಮರಾಜ-ಪ್ರತಿಬಂಧವಿಷ್ಟೆ ನನಗೆ ಚೆನ್ನಾಗಿ ಈಜಲಿಕ್ಕೆ ಬರುತ್ತದೆ. ಇದಲ್ಲದೆ ದುರ್ಯೋಧನನ ಹಾಗೆ ನನಗೆ ಜಲಸ್ತಂಭನ ವಿದ್ಯೆಯು ಬರುವುದು. ಪಾತಾಳದವರೆಗೆ ಮುಳುಗಿದರೂ ನಾನು ತಿರುಗಿ ಮೇಲಕ್ಕೆ ಬರುವೆನಲ್ಲದೆ, ನಿನ್ನನ್ನು ಸಹ ಮುಳುಗಗೊಡದೆ ಮೇಲಕ್ಕೆ ತರುವೆನು ! ಮೆಹರ್, ಹೀಗೆ ನಿನ್ನನ್ನು ಕಳಕೊಳ್ಳಬೇಕೆಂದು ನಾನು ಈ ಮೊದಲೆ ಹುಲಿಯ ಬಾಯೊಳಗಿಂದ ನಿನ್ನನ್ನು ಬಿಡಿಸಿಕೊಂಡು ಬಂದಿರುವೇನೋ ಏನು ?
ಇದನ್ನು ಕೇಳಿ ಸರಳ ಹೃದಯದ ಮೆಹರ್ಜಾನಳೂ ಮನಃಪೂರ್ವಕವಾಗಿ ನಕ್ಕಳು. ಆಕೆಯು ಪ್ರೇಮದಿಂದ ರಾಮರಾಜನನ್ನು ಕುರಿತು-
ಮೆಹರ್ಜಾನ-ಒಮ್ಮೆ ನನ್ನ ಜೀವವನ್ನು ಬದುಕಿಸಿದುದಕ್ಕಾಗಿ ನನ್ನ ದೇಹವನ್ನೇ ತಮಗೆ ಅರ್ಪಿಸಿರುವೆನು. ಇನ್ನೊಮ್ಮೆನನ್ನ ಜೀವವನ್ನು ಬದುಕಿಸಿದರೆ ತಮಗೆ ಕೊಡುವದಕ್ಕಾಗಿ ನನ್ನ ಬಳಿಯಲ್ಲಿ ಏನು ಇದೆ ?
ರಾಮರಾಜ-ಏನೂ ಇಲ್ಲದಿದ್ದರೆ ಇಲ್ಲ; ನನ್ನಿಂದ ಏನಾದರೂ ಅಪರಾಧವಾದರೆ ಅದನ್ನು ಕ್ಷಮಿಸಲಿಕ್ಕೂ, ನನಗೇನಾದರೂ ಪ್ರಾಣಸಂಕಟ ಒದಗಿ ಬಂದಾಗ, ಶಕ್ಯವಿದ್ದರೆ ನನ್ನನ್ನು ಬದುಕಿಸಲಿಕ್ಕೂ ನಿನಗೆ ಬರುವದಿಲ್ಲೇನು ? ಅಷ್ಟು ಮಾಡಿದರೆ ಸಾಕು.
ಮೆಹರ್ಜಾನ-(ಗಾಂಭೀರ್‍ಯದಿಂದ) ಸರಿ, ಸರಿ, ಇದೊಳ್ಳೆಯ ಮಾತು. ತಾವು ತಪ್ಪು ಮಾಡುವುದೂ ಬೇಡ, ನಾನು ಕ್ಷಮಿಸುವುದೂ ಬೇಡ : ಅದರಂತೆ ತಾವು ಪ್ರಾಣಸಂಕಟಕ್ಕೆ ಗುರಿಯಾಗುವದೂ ಬೇಡ. ನಾನೂ ಬದುಕಿಸುವುದೂ ಬೇಡ. ಸಾಕು, ಇನ್ನು ಈ ಮಾತುಗಳನ್ನೇ ಮರೆತು ಬಿಡೋಣ !
ರಾಮರಾಜ-ಹಾಗೇ ಹಾಗಲಿ! ಮೆಹರ್, ನಾನು ಬೆಳಗಾದ ಕೂಡಲೇ ವಿಜಯನಗರಕ್ಕೆ ಹೋಗಬೇಕಾಗಿದೆ ; ಹೀಗೆ ಎಷ್ಟು ಹೊತ್ತು ನೌಕೆಯಲ್ಲಿ ಕುಳಿತುಕೊಳ್ಳಬೇಕೆನ್ನುತ್ತೀ