ಹೇಳುತ್ತೀಯಲ್ಲ ! ನಿನ್ನ ಸೇವಕನಾದ ಈ ಮೂಕ ಧನಮಲ್ಲನು ಇಲ್ಲಿಯೇ ಇದ್ದಾನೆ, ಎಲ್ಲಿಯೂ ಹೋಗಿಲ್ಲ. ಇದೆಲ್ಲ ಭೂತಚೇಷ್ಟೆಯೆಂಬಂತೆ ನನಗೆ ತೋರುತ್ತದೆ. ನೀನು ಈಗ ನನ್ನ ಮಾತನ್ನು ಕೇಳಿ ಸ್ವಲ್ಪ ಹೊತ್ತು ಸುಮ್ಮನೆ ಮಲಗಿಕೊಂಡು ನಿದ್ದೆ ಮಾಡಬೇಕು. ನೀನು ನಿದ್ದೆ ಮಾಡಿ ವಿಶ್ರಾಂತಿಯನ್ನು ಹೊಂದಿದ ಬಳಿಕ ನಿನಗೊಂದು ಜೀನಸನ್ನು ಕೊಡುವೆನು, ಎಂದು ಹೇಳಲು, ಮೆಹರ್ಜಾನಳು-ಏನು ಹಾಗಾದರೆ ? ನಾನು ನೋಡಿದ್ದೆಲ್ಲ ಸ್ವಪ್ನವೇ ಏನು ? ನಾನು ನನ್ನ ಕೋಣೆಯಲ್ಲಿರುವದು ನಿಜವು ; ಆದರೆ ಅವರು ಎತ್ತ ಹೋದರು ? ಮಾರ್ಜೀನೇ, ಕಡೆಗೆ ಅವರು ನಿದ್ದೆ ಹತ್ತಿದಾಗ ನನ್ನ ಕೈಯೊಳಗಿಂದ ತಮ್ಮ ಕೈಯನ್ನು ಬಿಡಿಸಿಕೊಂಡು, ತನ್ನ ತೊಡೆಯ ಮೇಲಿಟ್ಟಿದ್ದ ನನ್ನ ತಲೆಯನ್ನು ತಲೆದಿಂಬಿನ ಮೇಲಿಟ್ಟು, ಹೇಳದೆ ಹೊರಟುಹೋದರಲ್ಲವೆ ? ಮಾರ್ಜೀನೆ, ಈಗ ನನಗೆ ಏನೋ ಕೊಡುತ್ತೇನೆಂದು ಹೇಳಿದೆಯಲ್ಲ : ತಾ. ಎಲ್ಲಿ ಅದೆ ಅದು ? ಹೇಳದೆ ಹೋದದ್ದಕ್ಕಾಗಿ ನಾನು ಅಸಮಾಧಾನಪಟ್ಟೇನೆಂದು ನನಗೆ ಕೊಡುವದಕ್ಕಾಗಿ ಮಹಾರಾಜರು ಪತ್ರವನ್ನು, ಇಲ್ಲವೆ ಯಾವದೊಂದು ಆಭರಣವನ್ನು ಕೊಟ್ಟಿರಬಹುದು ! ಸಣ್ಣ ಹುಡುಗರನ್ನು ರಮಿಸಿದ ಹಾಗೆ ನನ್ನನ್ನು ರಮಿಸಿದರೆ ನಾನು ಕೇಳುವ ಹಾಗಿಲ್ಲ. ಗುಪ್ತ ಸುದ್ದಿಯನ್ನು ಅವರಿಗೆ ಹೇಳೆಂದು ನಾನು ನಿನಗೆ ಹೇಳಿದ್ದೆನಷ್ಟೆ ? ಅವರ ಮುಂದೆ ಹೇಳಿದೆಯೇನು ? ಎಂದು ಕೇಳಲು, ಮಾರ್ಜೀನೆಯು..... ಹೇಳಿದೆನು, ಗುಪ್ತ ಸಂಗತಿಯನ್ನು ಮಹಾರಾಜರ ಮುಂದೆ ಹೇಳಿದೆನು ; ಆದರೆ ಅವರು ನಿಲ್ಲಲಿಲ್ಲ. ಮೆಹರ್ಜಾನ, ಮಹಾರಾಜರ ಆಗ್ರಹದ ಮುಂದೆ ನನ್ನ ಆಟವೇನು ನಡೆಯುವದು ಹೇಳು. ನೀನು ಅಂದಂತೆ ಮಹಾರಾಜರು ನಿನ್ನ ಸಮಾಧಾನಕ್ಕಾಗಿ ಪತ್ರವನ್ನು, ಅಥವಾ ಯಾವದೊಂದು ಅಲಂಕಾರವನ್ನು ಕೊಟ್ಟಿರಬಹುದು ; ಆದರೆ ಈಗ ಸ್ವಲ್ಪ ವಿಶ್ರಾಂತಿಯನ್ನು ತೆಗೆದುಕೋ, ಆ ಮೇಲೆ ಮಹಾರಾಜರು ಕೊಟ್ಟಿರುವ ಮೊಹರು ಮಾಡಿದ ಎರಡು ಚೀಟಿಗಳನ್ನು ನಿನಗೆ ಕೊಡುವೆನು, ಎಂದು ಹೇಳಿದಳು.
ಮಹಾರಾಜರ ಮುಂದೆ ಗುಪ್ತ ಸಂಗತಿಯನ್ನು ಹೇಳಿದೆನೆಂದು ಮಾರ್ಜೀನೆಯು ನುಡಿಯಲು, ಅದನ್ನು ಕೇಳಿ ಮೆಹರ್ಜಾನಳಿಗೆ ಮೊದಲು ಮನಸ್ಸಿನಲ್ಲಿ ಬಹಳ ಸಂತೋಷವಾಯಿತು; ಆದರೆ ಅವರು ನಿಲ್ಲದೆ ಹಾಗೇ ವಿಜಯನಗರಕ್ಕೆ ಹೋದದ್ದನ್ನು ಸ್ಮರಿಸಿ, ಆಕೆಯು ಅಸಮಾಧಾನದಿಂದ-ಮಾರ್ಜೀನೆ, ಆ ಮಾತನ್ನು ಕೇಳಿ ಮಹಾರಾಜರು ಏನು ಅಂದರು ? ಅವರ ಮುಖಲಕ್ಷಣವು ಹ್ಯಾಗಾಯಿತು ? ಅವರು ಎಷ್ಟು ಆನಂದಪಟ್ಟರು ? ಇದನ್ನು ಹೇಳಬಾರದೇ ?