ಪುಟ:Kannadigara Karma Kathe.pdf/೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೫೪

ಕನ್ನಡಿಗರ ಕರ್ಮಕಥೆ

೬ನೆಯ ಪ್ರಕರಣ

ರಾಮರಾಜನ ಪಶ್ಚಾತ್ತಾಪ


ದರ್ಗಾದಿಂದ ವಿಜಯನಗರವು ಒಳ್ಳೆ ಹದಿನೆಂಟು ಹರದಾರಿಯಿತ್ತು. ಗಾಡಿಗೆ ಹೂಡಿದ ಎತ್ತುಗಳು ಅತ್ಯುತ್ತಮವಿದ್ದದ್ದರಿಂದ ಅದಕ್ಕೆ ಹಾದಿ ನಡೆಯುವ ಲಕ್ಶ್ಯವಿದ್ದಿಲ್ಲ. ಬೆಳಗಾಗುವದರೊಳಗೆ ವಿಜಯನಗರಕ್ಕೆ ಮುಟ್ಟಬೇಕೆಂಬ ಆತುರದಿಂದ ಧನಮಲ್ಲನು ಎತ್ತುಗಳನ್ನು ಒತ್ತರದಿಂದ ನಡೆಸಹತ್ತಿದನು. ಆತನ ಮನಸ್ಸಿಗೆ ಸ್ವಸ್ಥವಿದ್ದಿಲ್ಲ. ಕೇವಲ ಮೆಹರ್ಜಾನಳ, ಹಾಗು ಮಾರ್ಜೀನೆಯ ಕಾವಲಿಗಾಗಿ ತನ್ನನ್ನು ನಿಯಮಿಸಿರಲು, ತಾನು ಹೀಗೆ ಅವರನ್ನು ಕಳಕೊಂಡ ಸುದ್ದಿಯನ್ನು ಕೇಳಿದರೆ ರಾಮರಾಜನು ಏನು ಮಾಡುವನೋ ಎಂಬ ಭಯದಿಂದ ಅವನ ಮನಸ್ಸು ಅಸ್ವಸ್ಥವಾಯಿತು. ಆತನಿಗೆ ಏನೂ ತೋಚಲೊಲ್ಲದು. ಅರುಣೋದಯ ಸಮಯಕ್ಕೆ ಆತನ ರಥವು ರಾಮರಾಜನ ಮನೆಯ ಬಾಗಿಲಿಗೆಹೋಯಿತು. ಎತ್ತುಗಳೂ ರಾತ್ರಿ ಒಂದೇ ಸಮನೆ ನಡೆದು ಬಂದದ್ದರಿಂದ ಬಹಳ ದಣಿದಿದ್ದವು. ಆದ್ದರಿಂದ ಧನಮಲ್ಲನು ಮೊದಲು ಎತ್ತುಗಳ ಯೋಗಕ್ಷೇಮವನ್ನು ತೆಗೆದುಕೊಂಡನು. ಧನಮಲ್ಲನು ರಾಮರಾಜನ ನಂಬಿಗೆಯವರಲ್ಲಿ ಒಬ್ಬನಾಗಿದ್ದನು. ಧನಮಲ್ಲನು ಮಧ್ಯರಾತ್ರಿಯಲ್ಲಿ ಬಂದು ನನ್ನನ್ನು ಕಾಣಬೇಕು ಎಂದು ಹೇಳಿದರೂ, ಕೂಡಲೇ ನನ್ನನ್ನು ಎಬ್ಬಿಸಿ ಸುದ್ದಿಯನ್ನು ಹೇಳಬೇಕೆಂದು ರಾಮರಾಜನು ಎಲ್ಲರಿಗೆ ಕಟ್ಟಪ್ಪಣೆ ಮಾಡಿದ್ದನು; ಆದರೆ ಈಗ ಧನಮಲ್ಲನು ಅಷ್ಟು ಅವಸರ ಮಾಡಲಿಲ್ಲ. ಮಹಾರಾಜರು ಎದ್ದು ಪ್ರಾತರ್ವಿಧಿಗಳನ್ನು ತೀರಿಸಿಕೊಂಡ ಕೂಡಲೆ ನಾನು ಬಂದಿದ್ದ ಸುದ್ದಿಯನ್ನು ಹೇಳಬೇಕೆಂದು ಕಾವಲುಗಾರರಿಗೆ ಸನ್ನೆಯಿಂದ ತಿಳಿಸಿದ್ದನು. ಇತ್ತ ಎತ್ತುಗಳ ವ್ಯವಸ್ಥೆಯಾಗುವದರೊಳಗೆ ರಾಮರಾಜನು ಧನಮಲ್ಲನನ್ನು ಕರೆಸಿಕೊಂಡನು. ಧನಮಲ್ಲನು ಒಳಗೆ ಬಂದಕೂಡಲೆ ಎಲ್ಲ ಸೇವಕರನ್ನು ರಾಮರಾಜನು ಹೊರಗೆ ಕಳಿಸಿದನು. ಒಂದು ಕೂಗಿನ ಅಳತೆಯಲ್ಲಿ ನಿಂತಿರುವಂತೆ ಒಬ್ಬ ಸೇವಕನಿಗೆ ಮಾತ್ರ ಅಪ್ಪಣೆಯಾಗಿತ್ತು. ಧನಮಲ್ಲನು ಏನು ಹೇಳುವನೆಂಬುದನ್ನು ಕೇಳಲಿಲ್ಲ ರಾಮರಾಜನು ಬಹು ಉತ್ಸುಕನಾಗಿರುವಂತೆ ತೋರುತ್ತಿತ್ತು. ಧನಮಲ್ಲನು