ಪುಟ:Kedage.pdf/೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ










ಕಲೆ ಮತ್ತು ವ್ಯವಸಾಯ

ಸಾಕಷ್ಟು ಪ್ರೌಢವಾಗಿ ಪ್ರಬುದ್ಧವಾಗಿ ಬೆಳೆದು ತನ್ನ
ದಾದ ಒಂದು ಖಚಿತ ಸ್ವರೂಪವನ್ನು, ಸ್ವಭಾವ
ವನ್ನು ಪಡೆದ ಒಂದು ಸಾಂಪ್ರದಾಯಿಕ ಕಲೆ, ಒಂದು
ವ್ಯವಹಾರವಾಗಿ, ಒಂದು ವ್ಯವಸಾಯವಾಗಿ ರೂಪು
ಗೊಂಡು 'ಬೆಳೆದಾಗ' ಏನೆಲ್ಲ ಸಮಸ್ಯೆಗಳು, ಅವಾಂತರ
ಗಳು ಎದುರಾಗುತ್ತವೆ ಎಂಬುದಕ್ಕೆ ನಮ್ಮ ಯಕ್ಷಗಾನ
ಪ್ರಾಯಶಃ ಅತ್ಯಂತ ಜೀವಂತ ಉದಾಹರಣೆಯಾಗಿದೆ.
ಯಕ್ಷಗಾನದಂತಹ ಕಲೆಯ ಎಲ್ಲ ಅಂಗೋಪಾಂಗಗಳ
ಬಗೆಗಿನ ಆಳವಾದ ಪರಿಜ್ಞಾನ ಅಂತಿರಲಿ, ಒಂದು
ಸಾಮಾನ್ಯ ಜ್ಞಾನ, ಅದರ ಬಗೆಗಿನ ಶ್ರದ್ಧೆ, ಬದ್ಧತೆಗಳ
ಯಾವ ಗೋಜೂ ಇಲ್ಲದೆ, ನಮ್ಮ ಶ್ರೀಮಂತ
ಸಾಂಸ್ಕೃತಿಕ ಸಂಪತ್ತೊಂದು ದಿನೇ ದಿನೇ ವಿರೂಪ,
ವಿಕಾರಗೊಳ್ಳುತ್ತಿರುವ ಬಗೆಗೆ ಯಾವ ವ್ಯಥೆ, ವ್ಯಸನ
ಗಳೂ ಇಲ್ಲದೆ ವ್ಯಾವಹಾರಿಕ ಯಶಸ್ಸು, ಅಗ್ಗದ
ಜನಪ್ರಿಯತೆಗಳ ಸೆಳವಿನಲ್ಲಿ ಸಿಕ್ಕು ನಾಗಾಲೋಟದಿಂದ
ಸಾಗುತ್ತಿರುವ ಈ ಕಲೆಯ ಸದ್ಯದ ಸ್ಥಿತಿಯನ್ನು
ಕಂಡರೆ, ಅಸಂಭವವೇನಾದರೂ ಸಂಭವಿಸದಿದ್ದರೆ,
ಪವಾಡಸದೃಶ ತಿರುವುಗಳೇನಾದರೂ ಬಾರದಿದ್ದರೆ,
ಈ ಕಲೆ, ತನ್ನ ಶ್ರೀಮಂತಿಕೆಯನ್ನು ಕಳೆದುಕೊಳ್ಳುವ
ದುರಂತಕ್ಕೆ ಬಹಳ ದೂರ ಇಲ್ಲ ಎಂಬ ಕಟು ಸತ್ಯ
ನಮ್ಮ ಮುಂದಿದೆ.