ವಿಷಯಕ್ಕೆ ಹೋಗು

ಪುಟ:Kedage.pdf/೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಪ್ರಸಂಗರಚನೆ: ರಂಗದೃಷ್ಟಿ /35

ಅರಿವು ಇರಬೇಕು. ಪ್ರಸಂಗಕರ್ತನಿಗೆ ಸಾಂಪ್ರದಾಯಿಕ ಶೈಲಿಯಾಗಲಿ, ಹೊಸ ಆಶಯದ ರೀತಿಯಾಗಲಿ —ಇಂತಹ ಸಾರ್ವತ್ರಿಕಭಾವವುಳ್ಳ ಕತೆಯನ್ನು ಆರಿಸುವುದರಿಂದ ಅನುಕೂಲಗಳಿವೆ. ಕತೆಗೆ ನಾಟಕೀಯತೆ ನೀಡಲು. ವಸ್ತು ಷೋಷಣೆಗೆ, ರಂಗತಂತ್ರಕ್ಕಾಗಿ ಆಶಯ ನೀಡಲು—ಹೀಗೆ ನಾಲ್ಕಾರು ಬಗೆಯಿಂದ ಬೇಕಾದ ಪರಿವರ್ತನೆಗಳನ್ನು ಅವನು ಮಾಡಿಕೊಳ್ಳಬೇಕು.

ಯಕ್ಷಗಾನ ಪ್ರಸಂಗಗಳಿಗೆ ಒಂದು ಸಿದ್ಧ ಭಾಷಾಶೈಲಿ ಇದೆ.ಅದೇ ರೀತಿಯಲ್ಲಿ ಇಂದಿನ ಪ್ರಸಂಗಕರ್ತನೂ ಬರೆಯುತ್ತಾನೆ, ಬರೆಯಬೇಕು. ಸಂಪ್ರದಾಯವೆಂಬುದರಿಂದಷ್ಟೇ ಅಲ್ಲ, ಆ ಭಾಷೆ ಅದು ಮಾಡುವ ಪರಿಣಾಮವು, ಯಕ್ಷಗಾನದ ಇತರ ಅಂಗಗಳ ಒಟ್ಟು ಸ್ವರೂಪಕ್ಕೆ ಪೋಷಿತವಾಗಿರಬೇಕಂಬುದರಿಂದ. ಪ್ರಸಂಗಗಳ ಕನ್ನಡ ಒಂದು ಬಗೆಯ ನಡುಗನ್ನಡ. ಅದನ್ನು ಬಿಟ್ಟು ಬರೆದರೆ ಏನೋ ಒಂದು ರೀತಿ ಕುಟುಕಿದಂತೆನಿಸುತ್ತದೆ. ಇದು ಪದಪ್ರಯೋಗಗಳ ಪ್ರಶ್ನೆ ಮಾತ್ರವಲ್ಲ. ಒಟ್ಟು ಜಾಡಿನ ಪ್ರಶ್ನೆ. ಉದಾಹರಣೆಗೆ, ಪರಿಸ್ಥಿತಿ ಸಮಾಚಾರ, ವಾತಾವರಣ—ಇವು ಹಳೆಯ ಪದಗಳೇ, ಅದರಲ್ಲೂ ಸಂಸ್ಕೃತ ಪದಗಳು, ಆದರೂ, ಯಕ್ಷಗಾನ ಪದ್ಯಗಳಲ್ಲಿ ಇವು ಬಂದಾಗ ವರ್ತಮಾನ ಕಾಲದ ಗಂಧ ಬಂದು ಆವರಣ ಕೆಡುತ್ತದೆ. ಹೀಗಾಗಿ ಹೊಸ ಆಶಯ, ಹೊಸ ಸಂಘರ್ಷಗಳನ್ನು ಚಿತ್ರಿಸುವಾಗ ಸಹ ಯಕ್ಷಗಾನಕವಿ ಸಿದ್ಧ ಶೈಲಿಯನ್ನೇ ಬಳಸ ಬೇಕು. ಸೃಷ್ಟಿಶೀಲನಾದವನು ಅದೇ ಶೈಲಿಯನ್ನು ರೂಪುಗೆಡದಂತೆ ಬೆಳೆಸಬೇಕು.

ಪ್ರಸಂಗದ ಪದ್ಯಗಳಿಗೆ ಇರಬೇಕಾದ ಒಂದು ಮುಖ್ಯ ಗುಣವೆಂದರೆ, ಅವು ಗಾನನೃತ್ಯಗಳಿಗೆ ಹೊಂದುವುದರ ಜತೆ ಅರ್ಥಗಾರಿಕೆಗೆ ಪ್ರೇರಣೆಯನ್ನೂ ಒದಗಿಸಬೇಕು. ಪದ್ಯವು ಹೇಳಬೇಕಾದ ಸಂಗತಿಯ ವಿವರಣೆ ಆಗಬಾರದು, ಸೂಚನೆ ಮಾತ್ರವಾಗಿರಬೇಕು. ಅರ್ಥಧಾರಿಗೆ ಬೇಕಾದ ವಿಷಯವನ್ನು ತರಲು, ಅಳವಡಿಸಲು ಬೇಕಾದ ಅವಕಾಶ ಅದರಲ್ಲಿ ಇರಬೇಕು.* ಇದನ್ನು 'ಅರ್ಥ ಪ್ರಸವ ಕ್ಷಮತೆ' ಎನ್ನೋಣ. ಪದ್ಯವು ಅರ್ಥಧಾರಿಯ ಕಲ್ಪನೆಯ ಕದವನ್ನು ತಟ್ಟಿ ತೆರೆಯಬೇಕು ಅಷ್ಟೆ. ವಿಷಯವೆಲ್ಲವನ್ನೂ ಪದ್ಯವೇ ಹೇಳಿಬಿಟ್ಟರೆ ವಿವರಣೆ ಯಾಗುತ್ತದೆ. ಅದು ಅರ್ಥಗಾರಿಕೆಗೆ ಅನುಕೂಲವಲ್ಲ.

ಉದಾ: ಪಂಚಪಟಿಯಲ್ಲಿ:
ವನಜಲೋಚನ ಕೇಳ್ಮುಂದೆ | ಘನವಾದ ಘೋರಡವಿಯಂತೆ | ಅನುವಿಲ್ಲದಾ
ಗಹ್ವರವಂತೆ | ಅಲ್ಲಿ ರಕ್ಕಸರು ಮನೆಮಾಡಿಕೊಂಡಿಹರಂತೆ ||


*ಆಲಂಕಾರಶಾಸ್ತ್ರವು ಹೇಳುವ ಧ್ವನಿಯ ಪರಿಕಲ್ಪನೆ ಇದಲ್ಲ.