ಪುಟ:Kedage.pdf/೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

46 ಕೇದಗೆ

ಒಂದು ಯೋಗಾಯೋಗ (ಅಲ್ಲಿ ಆ ಕಲೆಯ ಬೆಳವಣಿಗೆಗೆ ಅದೂ ಒಂದು ಕಾರಣವೆಂದೂ ಹೇಳಬಹುದು) ತಾಳಮದ್ದಲೆಯ ಭಾಷೆ, ನಮ್ಮ ವರ್ತಮಾನದ ಭಾಷೆಗಿಂತ ಹಳೆಯದೆನ್ನುವ ರೀತಿಯ, ಶೈಲೀಕೃತರೂಪದ, 'ಪಾಚೀನತೆ'ಯ ಕಲ್ಪನೆ ನೀಡುವ ಭಾಷೆ ಆಗಿರಬೇಕಾಗುತ್ತದೆ. ಅದು ಸಾಂಪ್ರದಾಯಿಕವಾದ, ಮತ್ತು ಪ್ರಾಚೀನ ಕಥಾವಸ್ತುಗಳನ್ನೂ ಪ್ರದರ್ಶಿಸುವುದರಿಂದ, ಆದರೆ, ಅದು ಆಶುಭಾಷಣವಾದುದರಿಂದ ಅದರಲ್ಲಿ ಆಡುಮಾತಿನ ಪದಗಳು, ವಿಭಕ್ತಿಪ್ರತ್ಯಯಗಳು, ವಾಗೂಢಿಗಳು ಮುಂತಾಗಿ ಅದರಲ್ಲಿ ಮಿಶ್ರಿತವಾಗಿ ಬರುತ್ತವೆ. ಆದರೆ, ಆಡುಮಾತು ಮತ್ತು ಗ್ರಾಂಥಿಕಭಾಷೆಯ ವೈದೃಶ್ಯದ ಸಮಸ್ಯೆ ಇಲ್ಲಿ ಅಷ್ಟಾಗಿ ಬರುವುದಿಲ್ಲ. ಇದಕ್ಕೆ ಕರಾವಳಿಯ ವಿಶಿಷ್ಟವಾದ ಭಾಷಾಸ್ವರೂಪವೇ ಕಾರಣ. ಕರಾವಳಿಯ ವ್ಯವಹಾರಭಾಷೆಯು ಕಿಂಚಿತ್ ವ್ಯತ್ಯಸ್ತರೂಪ, ಹಾಗೆಂದು ಇದನ್ನು ಗ್ರಾಂಥಿಕ ಭಾಷೆಯೆನ್ನಬಹುದು. ತಾಳಮದ್ದಲೆಯ ಭಾಷೆಯೂ ಅಂತಹದೇ ಒಂದು ಭಾಷೆ. ಮೇಲೆ ಹೇಳಿದ ಗ್ರಾಂಥಿಕ ಆಡುಭಾಷೆಯ ಒಂದಿಷ್ಟು ಸಾಂಪ್ರದಾಯಿಕ ನಾಟಕೀಯ ರೂಪ ಅದು ಎನ್ನಬಹುದು. ಇಲ್ಲಿ ಅರ್ಥಧಾರಿಗೆ ಒಂದು ಸೌಕರ್ಯವೂ ಜತೆಗೊಂದು ಪಂಥಾಹ್ವಾನವೂ ಇದೆ. ಗ್ರಾಂಥಿಕತೆಯ ಶೈಲಿ ಮತ್ತು ಆಡುಮಾತಿನ ಸ್ವಭಾವವನ್ನು ಹೊಂದಿಸುವಲ್ಲಿ ಅವನು ತುಂಬ ವಿವೇಕದಿಂದ ಕಲಾಪ್ರಜ್ಞೆಯಿಂದ ಯೋಚಿಸಿ ಅಳವಡಿಸಬೇಕು ಒಳ್ಳೆಯ ಅರ್ಥಧಾರಿ.

ಸಾಂಪ್ರದಾಯಿಕ ಕಲೆಗಳಲ್ಲಿ ಸಿದ್ಧ ಭಾಷೆಯೆಂಬುದು ಒಂದು ಮುಖ್ಯ ಅಂಶ. ಸಿದ್ಧ ಭಾಷೆಯನ್ನು ಎಷ್ಟು ಚೆನ್ನಾಗಿ ಬಳಸಬೇಕು, ಮಂಡಿಸಬೇಕು ಎಂಬುದೇ ಕಲಾವಿದನ ಮುಖ್ಯ ಕಾಳಜಿ. (ಇಲ್ಲಿ ಭಾಷೆಯೆಂದರೆ ಸಾಹಿತ್ಯ, ರಂಗತಂತ್ರ, ಅಭಿವ್ಯಕ್ತಿ, ವಿಭವದ, ಸಿದ್ಧಪೂರ್ವ ಸಂಪ್ರದಾಯ ಎಲ್ಲವನ್ನು ಒಳಗೊಂಡ Dramatic Language medium ಎಂಬ ಅರ್ಥದಲ್ಲಿ ಬಳಸಿದೆ.) ಇಂತಹ ಸಿದ್ಧ ಭಾಷೆಯು ಕಲಾವಿದನಿಗೆ ಒಂದು ಭದ್ರವಾದ ನೆಲೆಯನ್ನು ನೀಡಿ ಭಾವಸಂವಹನದ ಬಗೆಗೆ ನಿಶ್ಚಿತವಾದ ಚೌಕಟ್ಟನ್ನು ನೀಡುವುದಲ್ಲದೆ ಸಂವಹನದ ಬಗೆಗೆ ಅವನು ಯೋಚಿಸುವ ಆವಶ್ಯಕತೆಯನ್ನು ಕಡಿಮೆ ಮಾಡುತ್ತದೆ. ಅಷ್ಟರ ಮಟ್ಟಿಗೆ ಇರುವುದನ್ನು ಬೆಳೆಸುವ ವಿಧಾನದ ಬಗೆಗೆ ಅವನ ಗಮನವನ್ನು ಕೇಂದ್ರೀಕರಿಸುತ್ತದೆ. ಆದರೆ ಇಂತಹ ಸನ್ನಿವೇಶವೇ ತಾಳಮದ್ದಳೆಯ ಕಲಾವಿದನಿಗೆ ಹೊಸ ಸಮಸ್ಯೆಗಳನ್ನು ತಂದೊಡ್ಡುತ್ತದೆ.

ಸಿದ್ಧ ಭಾಷೆ ಸಂವಹನಕ್ಕೆ ಅಡ್ಡಿಯುಂಟುಮಾಡುವ ಸಂಭವವೂ ಉಂಟು. ಬಳಸಿ ಬಳಸಿ ಸವಕಲಾದ ಶೈಲಿಯು ಕಲಾವಿದ ಹೇಳಬೇಕಾದುದನ್ನು ಮುಚ್ಚಿ ಬಿಡುತ್ತದೆ. ನಮ್ಮ ಪ್ರಾಚೀನ ಸಾಹಿತ್ಯದ ಕವಿಸಮಯಗಳು ಉಪಮಾ ರೂಪಕಾದಿ ಅಲಂಕಾರಗಳು ಪದಪುಂಜಗಳು ಸಂವಹನಶಕ್ತಿಯನ್ನು ಕಳೆದುಕೊಂಡು