ವಿಷಯಕ್ಕೆ ಹೋಗು

ಪುಟ:Kedage.pdf/೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ತಾಳಮದ್ದಲೆಯ ಮಾತುಗಾರಿಕೆ /47

ಮೃತಪ್ರತಿಮೆಗಳಾಗುವುದು ಒಂದು ಸಾರ್ವತ್ರಿಕ ವಿದ್ಯಮಾನವಷ್ಟೆ. (Dead metaphors ಇತ್ಯಾದಿ) ಕೆಲವು ಅರ್ಥಧಾರಿಗಳು ಮಾತನಾಡುವಾಗ ಅವರ ಶಬ್ದಗಳ ರಮ್ಯತೆ, ಮಾತಿನ ಇಂಪು ಲಯಗಳ ಕಡೆಗೆ ಕೇಳುಗನ ಗಮನವಿರುವುದನ್ನು ನೋಡುತ್ತೇವೆ. ಇಂತಹ ಕಲಾವಿದನು ಹೊಸತಾದ ಕಲ್ಪನೆಯನ್ನು ಬಳಸಿ ಮಾತಾಡಿದಾಗಲೂ ಅದು ಪರಿಣಾಮ ಬೀರದೆ ಹೋಗಬಹುದು. ಕಲ್ಪನೆ ಹೊಸತು ಭಾಷೆ ಹಳತು ಎಂಬಂತಹ ಪರಿಸ್ಥಿತಿಯಿಂದ, ಹಾಗಾಗಿ ಸಿದ್ಧ ಭಾಷಾ ವಿಧಾನದಲ್ಲಿ ದುಡಿಯುತ್ತಿರುವ ರಂಗಕಲಾವಿದನು ಸೃಷ್ಟಿಶೀಲನಾಗಿದ್ದರೆ ಅವನು ಹೊಸ ಭಾಷೆ (ಅಭಿವ್ಯಕ್ತಿ ವಿಧಾನ)ಯ ಸೃಷ್ಟಿಯ ಸವಾಲನ್ನು ಅಂಗೀಕರಿಸ ಬೇಕಾಗುತ್ತದೆ. ವಿವಾದಾಸ್ಪದನಾಗುವ ರಿಸ್ಕ್ ತೆಗೆದುಕೊಳ್ಳಬೇಕಾಗುತ್ತದೆ. ಶೇಣಿ ಗೋಪಾಲಕೃಷ್ಣ ಭಟ್ಟ, ದೇರಾಜೆ ಸೀತಾರಾಮಯ್ಯ ಇವರ ಮಾತುಗಾರಿಕೆಯಲ್ಲಿ ಇಂತಹ ಪ್ರಯತ್ನ ಅತ್ಯಂತ ಯಶಸ್ವಿಯಾಗುವುದು ಕಾಣುತ್ತದೆ. ಕನ್ನಡದ ಅಗ್ರಮಾನ್ಯ ಪ್ರತಿಭಾವಂತರಲ್ಲೊಬ್ಬರಾದ ಶೇಣಿಯವರ ಮಾತುಗಾರಿಕೆಯಂತೂ ಹೊಸ ಭಾಷೆ ವಿಧಾನಗಳ ಸತತ ಶೋಧನೆಯಾಗಿದೆ. ಅವರ ಭಾಷೆಯಲ್ಲಿ ಶಿಷ್ಟ ಜಾನಪದ, ಸಿದ್ಧ ಸೃಷ್ಟ ಭಾಷೆಗಳ ಭೇದಗಳೇ ಮಾಯವಾಗಿ ಹೊಸತೊಂದು ಎರಕ ಆಗಿರುವುದು ಅವರ ಈ ಶೋಧನೆಗಳ ಫಲಸ್ವರೂಪ. ಸಾಹಿತ್ಯದಲ್ಲಾಗಲಿ ಕಲೆಯಲ್ಲಾಗಲಿ ಹೊಸ ಭಾಷೆಯ ಸೃಷ್ಟಿ ಒಂದು ಬದಲಾವಣೆಗಾಗಿ ಬರುವುದಿಲ್ಲ. ಹಾಗೆ ಬಂದರೆ ಅದು ಸ್ಥಾಯಿಯಾಗುವುದೂ ಇಲ್ಲ. ಹೊಸ ಭಾಷೆಯ ಶೋಧನೆ ಒಂದು ತಾತ್ವಿಕ ಅವಶ್ಯಕತೆಯಾಗಿರುತ್ತದೆ. ಶೇಣಿಯವರ ಭಾಷಾಪ್ರಯೋಗ ಇಂತಹ ತಾತ್ವಿಕ ಅರಿವಿನ ಹಿನ್ನೆಲೆಯುಳ್ಳದ್ದಾಗಿದೆ.

ತಾಳಮದ್ದಲೆ ಮುಖ್ಯವಾಗಿ ಒಂದು ಶ್ರವ್ಯಕಲೆ. ಇಲ್ಲಿ ಅಭಿನಯವಿದ್ದರೂ ಸಹ ಕಿವಿಗೆ ಇಳಿದಾಗಲೇ ಪರಿಣಾಮ ಮಾಡಬೇಕಾಗಿರುವ ಮಾತುಗಾರಿಕೆ ಇಲ್ಲಿ ಅವಶ್ಯ. ಪರಿಣಾಮಕಾರೀ ಸತ್ವವುಳ್ಳ ಕಂಠದ ಜೊತೆಗೆ ಅರ್ಥಗಾರ ಇಲ್ಲಿ ಮಾತಿನಲ್ಲಿ ರಂಜಕವಾದ ಅಂಶಗಳಿಗೆ ಸೂಕ್ತಸ್ಥಾನ ಕಲ್ಪಿಸಬೇಕಾಗಿರುತ್ತದೆ. ಔಚಿತ್ಯ ಕಲ್ಪನೆ ಇಲ್ಲಿ ಹಿಗ್ಗುತ್ತದೆ. ಧ್ವನಿಕಲ್ಪನೆಯ ಪ್ರೌಢತೆಗಳ ಸಂವಹನದಲ್ಲಿ ಲಿಖಿತ ಮಾಧ್ಯಮಕ್ಕಿರುವ ಸೌಲಭ್ಯ ಅರ್ಥಗಾರನ ಮಾತಿಗಿಲ್ಲ.

ಅರ್ಥಗಾರನು ಬರಿಯ ಪಾತ್ರಧಾರಿ - actor - ಅಲ್ಲ. ಅಲ್ಲಿ ಅವನು ನಾಟಕಕಾರ, ನಟ, ನಿರ್ದೇಶಕ ಎಲ್ಲವೂ ಸೇರಿರುವ ಕಲಾವಿದನಾಗಬೇಕಾಗುತ್ತದೆ. ವಾದ, ಸಂವಾದಗಳು ಅರ್ಥಗಾರಿಕೆಯ ಪ್ರಮುಖ ಅಂಗಗಳಾದುದರಿಂದ ನಿಶ್ಚಿತವಾದ ತರ್ಕ ಸಾಮರ್ಥ್ಯ ಅವನಿಗಿರಬೇಕು.ಜತೆಗೆ ಸಂವಾದವನ್ನು ಬೆಳಸಬಲ್ಲ ಪ್ರತಿಭೆ, ಇನ್ನೊಬ್ಬನ ಮಾತಿಗೆ ತಕ್ಷಣ ಸೇರಿಕೆಯಾಗುವಂತೆ ಹೊಂದಿಕೊಳ್ಳುವ ರಸಿಕತೆ, ಇನ್ನೊಬ್ಬನ ಮಾತಿನ ಧಾಳಿ ಧೋರಣೆಗಳನ್ನು ಅರ್ಥವಿಸುವ ಉದಾರ