ತುಳು ಯಕ್ಷಗಾನಗಳನ್ನು ಆಕ್ಷೇಪಿಸುವವರನ್ನು 'ತುಳು ವಿರೋಧಿಗಳು' ಎಂದು ಸುಲಭವಾಗಿ ಹಣೆಪಟ್ಟಿ ಹಚ್ಚುವುದನ್ನು ನಾನು ಕೇಳಿದ್ದೇನೆ. ತುಳು ಯಕ್ಷಗಾನಗಳನ್ನು ಟೀಕಿಸುವವರೆಲ್ಲ ತುಳು ವಿರೋಧಿಗಳೆಂಬ ಈ ಹಣೆಪಟ್ಟಿ ಹಚ್ಚುವ ಯತ್ನವೇ ಒಂದು ಬಗೆಯ ಅಪ್ರಾಮಾಣಿಕ ಪ್ರವೃತ್ತಿ. ತುಳು ಯಕ್ಷಗಾನವನ್ನು ಆಕ್ಷೇಪಿಸುವವರು ಯಾವ ಕಾರಣಕ್ಕಾಗಿ ಎಂತಹ ಸಂದರ್ಭದ ಹಿನ್ನೆಲೆಯಲ್ಲಿ ಆಕ್ಷೇಪಿಸುತ್ತಾರೆ ಎಂಬುದನ್ನು ಸಾವಧಾನಚಿತ್ತದಿಂದ ಪರಿಶೀಲಿಸುವ ಗೋಜಿಗೆ ಹೋಗದೆ, ಸಾರಾಸಗಟು ತೀರ್ಮಾನವನ್ನು ಹೇಳುವುದು ವಿಮರ್ಶೆಯ, ಸಮಸ್ಯೆಯ ಆಳಕ್ಕೆ ಹೋಗದೆ ಅಥವಾ ಹೋಗುವ ಮನಸ್ಸಿಲ್ಲದೆ ಆಕ್ಷೇಪವನ್ನು ತಳ್ಳಿಹಾಕುವ ಸುಲಭತಂತ್ರ ಮಾತ್ರ ಆಗುತ್ತದೆ ಅಷ್ಟೆ.
ತುಳು ಯಕ್ಷಗಾನ ಪ್ರಯೋಗಗಳಿಂದ ಆಗಿರುವ ಬಲು ದೊಡ್ಡದಾದ, ದೂರಗಾಮಿಯಾದ, ವಿಪರೀತ ಪರಿಣಾಮವೆಂದರೆ, ಯಕ್ಷಗಾನದ ವೇಷಭೂಷಣಗಳ ಅಸಾಧಾರಣವಾದ ಸೌಂದರ್ಯ ಅದರ ಶಿಸ್ತುಗಳನ್ನು ಸಂಪೂರ್ಣವಾಗಿ ಕಡೆಗಣಿಸಿದ್ದು. ಇದರಿಂದ ಯಕ್ಷಗಾನಕ್ಕೆ ಆಗಿರುವ ಭಯಂಕರವಾದ ಹಾನಿಯನ್ನು ನೋಡಿದಾಗ ವ್ಯಸನವಾಗುತ್ತದೆ. ತುಳು ಯಕ್ಷಗಾನಗಳಲ್ಲಿ ಪ್ರಯೋಗಿಸುವ ವೇಷಭೂಷಣಗಳಿಗೆ ಯಾವುದೇ ಶೈಲಿಯಾಗಲಿ ಸ್ವರೂಪವಾಗಲಿ ಇಲ್ಲ. ನೃತ್ಯದ ಆವಶ್ಯಕತೆಯನ್ನು ಆಧರಿಸಿ, ರಮ್ಯಾದ್ಭುತ ಪಾತ್ರ ಸೃಷ್ಟಿಯನ್ನು ಲಕ್ಷಿಸಿ ಸೃಷ್ಟಿಯಾದ ಅನರ್ಘ್ಯವಾದ ಒಂದು ಪರಂಪರೆಯ ಸಂಪತ್ತನ್ನು ನಾವು ಹೀಗೆ ನಾಶಮಾಡಹೊರಟಿರುವುದಕ್ಕೆ ಯಾವ ಸಮರ್ಥನೆಯೂ ಇರಲಾರದು. ಇಂದು ತೆಂಕುತಿಟ್ಟಿನ ಬಹುಪಾಲು ರಂಗವನ್ನು ಆವರಿಸಿರುವ ವೇಷಭೂಷಣಗಳು ತೀರ ದುರ್ಬಲವಾದ, ಸ್ವೇಚ್ಛಾಸೃಷ್ಟಿಗಳು. ಅವುಗಳನ್ನು ಕಟ್ಟಿಕೊಂಡು ಕುಣಿಯುವುದೂ ವಿಲಕ್ಷಣವಾಗಿಯೇ ಕಾಣಿಸುತ್ತದೆ. ಯಕ್ಷಗಾನದ ಒಂದೊಂದು ಅಂಗಕ್ಕೂ ಇನ್ನೊಂದು ಅಂಗದ ಸಂಬಂಧ ಇರುವುದರಿಂದ, ಈ ವೇಷಭೂಷಣಗಳೇ ಸ್ಥಾಯಿಯಾಗಿ ಉಳಿದರೆ, ಕುಣಿತವೂ ಕೂಡ ಕಡಿಮೆಯಾಗಿ, ಅಲ್ಲ ಮರೆ ಯಾಗಿಯೇ ಹೋಗಬಹುದು. ಆದುದರಿಂದ ಇಲ್ಲಿ ಒತ್ತಿಹೇಳಬೇಕಾದ ಮಾತೆಂದರೆ ತುಳುಯಕ್ಷಗಾನಕ್ಕೆ ಆಕ್ಷೇಪ ಇರುವುದು ತುಳುಭಾಷೆಗಾಗಿ ಅಲ್ಲವೇ ಅಲ್ಲ. ಅದು ಯಕ್ಷಗಾನದ ಶ್ರೀಮಂತ ಪರಂಪರೆಗೆ ಕಳಂಕಪ್ರಾಯವಾಗಿದೆ ಎಂಬ ವಿವಾದಾತೀತ ಸತ್ಯಕ್ಕಾಗಿ. ಅಂದರೆ, ತುಳು ಭಾಷೆಯ ಬಗೆಗೆ ಆಕ್ಷೇಪಕನಿಗೆ ಅನಾದರ ಇರುವುದರಿಂದಲ್ಲ, ಬದಲಾಗಿ ಯಕ್ಷಗಾನ ಪರಂಪರೆಯ ಮೇಲಣ ಆಸಕ್ತಿಯಿಂದ.
ತೆಂಕುತಿಟ್ಟಿನ ವೇಷವಿಧಾನವು ದಿಕ್ಕಾಪಾಲಾಗಲು, ತುಳು ಯಕ್ಷಗಾನ ಪ್ರಯೋಗವೇ ಕಾರಣವೆ? ಎಂಬ ಪ್ರಶ್ನೆ ಇದೆ. ಇದಕ್ಕೆ ಹೌದು ಅದೇ ಮುಖ್ಯ ಕಾರಣ ಎನ್ನಬೇಕಾಗಿದೆ. ಇದಕ್ಕೆ ಕಳೆದ ಮೂರು ದಶಕಗಳ ಯಕ್ಷಗಾನದ