ಇತಿಹಾಸ ಸಾಕ್ಷಿ ಹೇಳುತ್ತದೆ. ತುಳು ಯಕ್ಷಗಾನದ ವ್ಯಾಪಕ ಪ್ರಯೋಗವೂ, ವೇಷಭೂಷಣಗಳಲ್ಲಿ ಪರಂಪರೆ ಮೂಲೆಗುಂಪಾಗುವುದೂ, ಒಂದರ ಜತೆಗೆ ಇನ್ನೊಂದು ಅವಿಭಾಜ್ಯವಾಗಿ, ಅನಿವಾರವಾಗಿ ಎಂಬಂತೆ ನಡೆದಿದೆ. ಇದು ಅಲ್ಲ ಗಳೆಯಲಾಗದ ಒಂದು ಸತ್ಯ ಸಂಗತಿ. ತೆಂಕುತಿಟ್ಟಿನಲ್ಲಿ ಇದು ಬರಿಯ ಕಾಕತಾಳೀಯ ವಾದ ಪರಿವರ್ತನೆ ಅಲ್ಲ. ತುಳು ಯಕ್ಷಗಾನವೆಂದರೆ, ಅದರಲ್ಲಿ ಪರಂಪರಾಗತ ವೇಷವಿಧಾನ ಇರಬಾರದು ಎಂಬ ನಿಯಮವನ್ನೇ ಕಲಾವಿದರೂ, ವ್ಯವಸಾಯ ವೇಳಗಳ ಸಂಚಾಲಕರೂ ಮಾಡಿದಂತೆ ತೋರುತ್ತದೆ.
ಈ ಸಂದರ್ಭದಲ್ಲಿ ಬಡಗುತಿಟ್ಟು - ತೆಂಕುತಿಟ್ಟುಗಳ ಹೋಲಿಕೆ ತುಂಬ ಪ್ರಸ್ತುತವಾದದ್ದು. ಕಳೆದ ಮೂರುದಶಗಳಲ್ಲಿ ತೆಂಕು - ಬಡಗುತಿಟ್ಟುಗಳಲ್ಲಿ (ಉ. ಕನ್ನಡದ ತಿಟ್ಟು ಸಹಿತ) ಆದ ಪರಿವರ್ತನೆಗಳನ್ನು (ಮುಖ್ಯವಾಗಿ ವೇಷ ಭೂಷಣಗಳಲ್ಲಿ) ಹೋಲಿಸಿದರೆ ಒಂದು ವಿಷಯ ಸ್ಪಷ್ಟವಾಗುತ್ತದೆ. ಬಡಗು ತಿಟ್ಟಿನ ವೇಷಗಳ ಕ್ರಮದಲ್ಲಿ ಆಗಿರುವ 'ಪರಿವರ್ತನೆ' ಬಹಳ ಕಡಿಮೆ. ಇದಕ್ಕೆ ಕಾರಣವೇನು? ಬಡಗಿನ ಮೇಳಗಳಲ್ಲೂ ಹಲವು ಪ್ರಸಂಗಗಳು ಪ್ರತಿವರ್ಷವೂ ಪ್ರದರ್ಶನಗೊಳ್ಳುತ್ತವೆ. ಆದರೆ, ಅವುಗಳನ್ನು ಯಕ್ಷಗಾನದ ಪರಂಪರಾಗತ ವೇಷಗಳ ಚೌಕಟ್ಟಿನಲ್ಲಿ ಪ್ರದರ್ಶಿಸುತ್ತಾರೆ. ಹಾಗಾಗಿ ಹೊಸ ಪ್ರಸಂಗಗಳೂ ಕೂಡಾ ಸಲೀಸಾಗಿ ಪರಂಪರೆಯ ಒಂದು ಮುಂದುವರಿದ ಭಾಗವಾಗಿ ಒಂದು ಅಂಗವಾಗಿ ಬಂದಂತೆ ಕಾಣುತ್ತದೆ. ಅಂದರೆ, ಬಡಗುತಿಟ್ಟು ತನ್ನ 'ಕ್ಲಾಸಿಕಲ್' ಸಂಪ್ರದಾಯವನ್ನು ಬಿಡದೆ ಹೊಸತನವನ್ನು ತಂದಿದೆ. (ಇಲ್ಲಿ ನಾನು ಬರೆಯು ತಿರುವುದು ಮುಖ್ಯವಾಗಿ ವೇಷವಿಧಾನದ ಬಗ್ಗೆ ಮಾತ್ರವಲ್ಲ, ಬಡಗುತಿಟ್ಟಿನಲ್ಲಿ ವೇಷಭೂಷಣಗಳಲ್ಲಿ ಬದಲಾವಣೆಗಳೂ, ಕಂಪೆನಿ ನಾಟಕ, ಕ್ಯಾಲೆಂಡರ್ ಅನುಕರಣೆಯೂ ಬಂದಿರುವುದನ್ನು ಇಲ್ಲಿ ಮರೆತಿಲ್ಲ. ಆದರೆ ತೆಂಕುತಿಟ್ಟಿಗೆ ಹೋಲಿಸಿದಾಗ ಪರಿಸ್ಥಿತಿ ತುಂಬ ಉತ್ತಮವಿದೆ.) ಇದಕ್ಕೆ ಪರಂಪರೆಯ ನಿಷ್ಠೆ ಎಷ್ಟು ಕಾರಣವೋ ಅಷ್ಟೇ ಮುಖ್ಯವಾದ ಇನ್ನೊಂದು ಕಾರಣವಿದೆ. ಬಡಗುತಿಟ್ಟಿನ ಹೆಚ್ಚಿನ ಏಕೆ, ಹೆಚ್ಚು ಕಡಿಮೆ ಎಲ್ಲ ಕಲಾವಿದರೂ ತುಳು ಭಾಷೆ ಮಾತನಾಡಲು ತಿಳಿಯದವರು. ಈ ಜಿಲ್ಲೆಯ ಕನ್ನಡ ಪ್ರದೇಶದವರು ಮತ್ತು ಉತ್ತರ ಕನ್ನಡ, ಶಿವಮೊಗ್ಗ ಜಿಲ್ಲೆಗಳವರು. ಈ ಒಂದು ಸ್ವಾರಸ್ಯವಾದ ಅಂಶ. ಬಡಗಿನಲ್ಲಿ ಪರಂಪರೆಯನ್ನು ಕಾಯ್ದುಕೊಳ್ಳಲು ತುಂಬ ಸಹಾಯಕವಾಗಿರುವುದು ಗಮನಾರ್ಹ. ಅಥವಾ ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ಬಡಗು ತಿಟ್ಟಿನ ಕಲಾವಿದರೆಲ್ಲ ತುಳು ಬಲ್ಲವರಾಗಿರುತ್ತಿದ್ದರೆ, ಅವರೂ ತುಳು ಪ್ರದರ್ಶನಗಳನ್ನು ನೀಡುತ್ತಿದ್ದರೇನೋ, ಆಗ ತೆಂಕುತಿಟ್ಟಿನಲ್ಲಾದ ಸ್ಥಿತಿಯು, ಬಡಗಿನಲ್ಲೂ ವ್ಯಾಪಿಸಲು ಸಾಧ್ಯವಿತ್ತು. ಆದರೆ ಹಾಗಾಗಲಿಲ್ಲ.