ಪುಟ:Mahakhshatriya.pdf/೧೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಮುಚ್ಚಿದ ಕಣ್ಣಿಗೆ ಕಂಡ ರೂಪದಂತೆ ಆಗುವುದು. ಅಲ್ಲದೆ, ಸತ್ಯವು ಕೂಡ ದೇಶಕಾಲಾತ್ಮಕವಾದ ಜಗತ್ತಿನಲ್ಲಿ ಕಾಣುವಾಗ ಯೋಗಮಾಯೆಯ ಛಾಯೆಗೆ ಒಳಪಟ್ಟಿರುವುದರಿಂದ ಅದು ಥಟ್ಟನೆ ಕಾಣದಾಗುವುದು. ಅದರಿಂದಲೇ ಸತ್ಯಧರ್ಮಗಳಿಗೆ ಚಿನ್ನದ ಪಾತ್ರೆಯನ್ನು ಮುಚ್ಚಿದೆಯೆಂದು ವೇದಗಳಲ್ಲಿ ಹೇಳಿರುವುದು. ಅದನ್ನು ಆ ಪಾತ್ರೆಯನ್ನು, ಪೂಷಾದೇವನೊಬ್ಬನು ತೆಗೆಯಬಲ್ಲನು. ಒಮ್ಮೆ ಆತನ ದಯೆಯಿಂದ ಸತ್ಯಧರ್ಮಗಳ ದರ್ಶನವಾದರೆ, ಅದು ಎಂದಿಗೂ ಮರೆಯುವುದಿಲ್ಲ.

ಅಲ್ಲದೆ, ಸತ್ಯವು ಬುದ್ಧಿಗೆ ಗೋಚರವಾದಾಗ, ವ್ಯಕ್ತಿ ಕಾಲದೇಶಾನುಗುಣವಾಗಿ ವ್ಯತ್ಯಾಸವನ್ನು ಹೊಂದಿ, ಕನ್ನಡಿಯಲ್ಲಿ ಕಾಣುವ ಪ್ರತಿಬಿಂಬವು ಗಾಜಿನ ಹಿಂದಿನ ರಸದ ಪ್ರಾಬಲ್ಯ - ಅಪ್ರಾಬಲ್ಯಗಳಿಂದ ಹೆಚ್ಚು ಕಡಿಮೆಯಾಗುವಂತೆ ಹೆಚ್ಚು ಕಡಿಮೆಯಾಗುವುದು. ಅದನ್ನು ಸ್ಪಷ್ಟವಾಗಿ ದೃಷ್ಟಿದೋಷವಿಲ್ಲದಂತೆ ಕಾಣಬೇಕಾದರೆ ಬ್ರಹ್ಮಲೋಕಕ್ಕೆ ಹೋಗಬೇಕು. ಅಥವಾ ತಾನಿರುವಲ್ಲಿಗೆ ಬ್ರಹ್ಮಲೋಕವು ಬರುವಂತೆ ಮಾಡಿಕೊಳ್ಳಬೇಕು. ಅಲ್ಲಿ ಆ ಸತ್ಯವು ಹಗಲಿನಲ್ಲಿ ಕಂಡಂತೆ ಕಾಣುವುದು. ಅಂತರಂಗಶುದ್ಧಿಯನ್ನು ಸಂಪಾದಿಸಿಕೊಳ್ಳುವುದೇ ಬ್ರಹ್ಮಲೋಕವನ್ನು ಸಾಧಿಸುವುದು. ಅದರಿಂದ, ತಿಳಿದವರು ತಾವು ಅಂತರಂಗಶುದ್ಧಿಯನ್ನು ಸಂಪಾದಿಸಿಕೊಂಡು ಸತ್ಯದರ್ಶನ ಮಾಡುವರು. ತಾವು ಕಂಡುದು ಸರಿಯೆಂದು ನಿಶ್ಚಯಿಸಿಕೊಳ್ಳಲು ಹಿಂದಿನ ಶಾಸ್ತ್ರಜ್ಞರ ವಾಣಿಯನ್ನು ನೆನೆಸಿಕೊಳ್ಳುವರು. ಇವೆರಡಕ್ಕೂ, ಎಂದರೆ ತಮ್ಮ ದರ್ಶನಕ್ಕೂ ಹಿಂದಿನವರ ಶಾಸ್ತ್ರಕ್ಕೂ ಆಧಾರವು ವೇದವೆಂದು ಅದನ್ನು ಪ್ರಮಾಣಿಸುವರು. ಹೀಗೆ ಶ್ರುತಿ. ಅದನ್ನು ಅನುಸರಿಸಿದವರ ಸ್ಮೃತಿಶಾಸ್ತ್ರ-ತಾನು ಪಡೆದ ಅನುಭವ ಎಂಬ ಮೂರೂ ಏಕತಾನವಾಗುವುದೇ ಸತ್ಯದರ್ಶನವು.

ಶ್ರುತಿಯೇ ಪ್ರಮಾಣವೆಂದು ಮಿಕ್ಕವನ್ನು ತಿರಸ್ಕರಿಸಬಾರದು. ಹಾಗೆಯೇ ಈ ಮೂರರಲ್ಲಿ ಒಂದೇ ಸರಿಯೆಂದು ಮಿಕ್ಕವನ್ನು ಕಡೆಗಾಣಬಾರದು. ವೇದಾರ್ಥವನ್ನು ಇತಿಹಾಸಪುರಾಣಗಳಲ್ಲಿ ವಿಸ್ತಾರವಾಗಿ ಹೇಳಿರುವುದನ್ನು ತನ್ನ ಅನುಭವದಿಂದ ಗೋಚರವಾದುದನ್ನು ಒಂದೇ ಎಂದು ತಿಳಿದವನು ಸತ್ಯದರ್ಶನವನ್ನು ಪಡೆದವನು.

ಹಾಗೆ ತಾನು ಕಂಡಿದ್ದರೂ, ಆ ಅರ್ಥವನ್ನು ಇತರರಿಗೆ ಹೇಳುವಾಗ, ಕೇಳುವವನಿಗೆ ಅರ್ಥವಾಗುವಂತೆ, ಸಮಂಜಸವಾಗಿ, ಸಕಾರಣವಾಗಿ, ನ್ಯಾಯವಾಗಿ ಹೇಳಬೇಕು. ಹಾಗಿಲ್ಲದೆ ತನಗೆ ತೋರಿದಂತೆ ಮಾಡಿದರೆ ನಿಮ್ಮ ಹಿಂದಿನ ಚಕ್ರವರ್ತಿ ಪುರೂರವನು ಮಾಡಿದಂತಾಯಿತು.”