ಪುಟ:Mahakhshatriya.pdf/೧೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೩.ಧರ್ಮಾಸನದಲ್ಲಿ ಅರಸ

ನಹುಷಚಕ್ರವರ್ತಿಯು ಧರ್ಮಾಸನಾಸೀನನಾಗಿದ್ದಾನೆ. ನ್ಯಾಯಸ್ಥಾನದ ನಿರ್ಣಯವನ್ನು ವಿರೋಧಿಸಿದ ಮೂವರು ಅರಸನ ಬಳಿಗೆ ಬಂದಿದ್ದಾರೆ. ಧರ್ಮ ವಿಚಾರವನ್ನು ಚಕ್ರವರ್ತಿಯ ಎದುರಿನಲ್ಲಿ ನಿವೇದಿಸಲು ಅರಮನೆಯ ಧರ್ಮಾಧಿಕಾರಿಗಳು ಬಂದಿದ್ದಾರೆ. ರಾಜಪುರೋಹಿತ, ರಾಜಗುರು ಇಬ್ಬರೂ ಅವರವರ ಸ್ಥಾನಗಳಲ್ಲಿದ್ದಾರೆ. ಸಭೆಯು ಮಿತವಾಗಿದೆ.

ಮೊದಲನೆಯ ವಾದಿ ಜನ್ಮತಃ ಬ್ರಾಹ್ಮಣ. ಆದರೆ ಆತ ಬ್ರಾಹ್ಮಣ ಧರ್ಮವನ್ನು ಗೌರವಿಸದೆ ಅದು ಬೇಡವೆಂದವನು. ನ್ಯಾಯಾಸ್ಥಾನವು “ಇವನು ಪತಿತ ಸಾವಿತ್ರೀಕ. ಗಾಯತ್ರಿ, ಅಗ್ನಿ, ವೇದಗಳನ್ನು ಬಿಟ್ಟವನು. ಆದ್ದರಿಂದ, ಇವನಿಗೆ ದಾಯವನ್ನು ಕೊಟ್ಟರೂ ಧರ್ಮವೂ ಅಗ್ನಿಯೂ ವೃದ್ಧಿಯಾಗುವುದಿಲ್ಲವಾದ್ದರಿಂದ, ಇವನು ದಾಯಭಾಗಕ್ಕೆ ಅರ್ಹನಲ್ಲ. ಇವನು ಪ್ರಾಯಶ್ಚಿತ್ತಗಳನ್ನು ಮಾಡಿಕೊಂಡು ಸಾವಿತ್ರಿಯನ್ನು ಅಂಗೀಕರಿಸಿದರೆ ಮಾತ್ರ ದಾಯಭಾಗಕ್ಕೆ ಅರ್ಹನು” ಎಂದು ನಿರ್ಣಯಿಸಿದೆ. ಅವನು ವಿರೋಧಿಸಿ ತನಗೆ ದಾಯಭಾಗ ಬೇಕೆಂದು ಅರಸನ ಬಳಿಗೆ ಬಂದಿದ್ದಾನೆ.

ಮತ್ತೊಬ್ಬನು ತಾನು ದೇಶಾಂತರದಲ್ಲಿ ನೆಲಸಬೇಕಾಗಿರುವುದರಿಂದ ತನ್ನ ಆಸ್ತಿಯನ್ನು ಅಲ್ಲಿಗೆ ತೆಗೆದುಕೊಂಡು ಹೋಗಬೇಕೆನ್ನುತ್ತಾನೆ. ನ್ಯಾಯಾಸ್ಥಾನವು “ಇವನು ದೇಶವನ್ನೇ ಬಿಟ್ಟು ಹೋಗುವವನಾದ್ದರಿಂದ ಈ ಆಸ್ತಿಯಲ್ಲಿ ಈತನಿಗೆ ಒಂದು ವರ್ಷಕ್ಕೆ ಬೇಕಾಗುವಷ್ಟು ಮಾತ್ರ ತೆಗೆದುಕೊಂಡು ಹೋಗಬೇಕಲ್ಲದೆ, ಹೆಚ್ಚಾಗಿ ತೆಗೆದುಕೊಂಡು ಹೋದರೆ ನಮ್ಮ ದೇಶದ ಆಸ್ತಿಯು ಅಷ್ಟು ಕಡಿಮೆಯಾಗುವುದರಿಮದ ಅದು ಕೂಡದು. ಅಲ್ಲದೆ, ಉಪಭೋಗಕ್ಕೆ ಎಂದರೆ, ಧರ್ಮಾರ್ಥಕಾಮೋಪಭೋಗಕ್ಕೆ, ತನ್ನ ಆಸ್ತಿಯನ್ನು ಉಪಯೋಗಿಸಲು ಎಲ್ಲರಿಗೂ ಅಧಿಕಾರವುಂಟು. ಆದರೆ ಅದನ್ನು ಪೋಲು ಮಾಡಲು, ದೇಶಾಂತರಕ್ಕೆ ಕೊಂಡೊಯ್ಯಲು ಅಧಿಕಾರವಿಲ್ಲ” ಎಂದು ನಿರ್ಣಯಿಸಿದೆ. ಅದನ್ನು ವಿರೋಧಿಸಿರುವ ವಾದಿ ವೈಶ್ಯ. ಇನ್ನೊಬ್ಬನು ಅದಮ್ಯನಾದ ದುಷ್ಟ ಪಾಳೆಯಗಾರ, ಸಾಹಸಿ. ತನ್ನ ಪ್ರಾಂತ್ಯದಲ್ಲಿ ಕಳ್ಳಕಾಕರಾದಿಯಾಗಿ ದುಷ್ಟರು ಯಾರಿಗೂ ಅವಕಾಶ