ವಿಷಯಕ್ಕೆ ಹೋಗು

ಪುಟ:Mahakhshatriya.pdf/೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ನೀನು ನಿನ್ನ ಆದರ ಗೌರವಗಳಿಗೆ ಪಾತ್ರರಾದ ನಮಗೆ ಇನ್ನು ಯಾವ ವಿಧದಿಂದಾದರೂ ಶ್ರೇಯಸ್ಸಾಗುವಂತೆ ಮಾಡುವುದಾದರೆ ಮಾಡು. ಇಲ್ಲವಾದರೆ, ನಮ್ಮ ಕಾಳಿನಲ್ಲಿ ಇದೊಂದು ಜೊಳ್ಳಾಯಿತು ಎಂದುಕೊಂಡು ಇನ್ನು ಯಾವುದಾದರೂ ಮಾರ್ಗವನ್ನು ಹಿಡಿಯುವೆವು.”

ವಿಶ್ವರೂಪಾಚಾರ್ಯನು ವಿರೂಪಾಕ್ಷನ ವಾದವನ್ನು ಮನಃಪೂರ್ವಕವಾಗಿ ಕೇಳಿದನು. ಆತನೂ ಯೋಚಿಸಿದನು : “ಕೇವಲ ಅಭಿಮಾನದಿಂದ ಯಾವುದನ್ನೂ ಇತ್ಯರ್ಥ ಮಾಡಲಾಗುವುದಿಲ್ಲ. ತಾನು ದೇವಬೀಜದವನು. ಅಸುರಮಾತೃವೆಂದು ಅಭಿಮಾನದಿಂದ ಅತ್ತ ತಿರುಗಿದರೆ ಅದು ಅಧರ್ಮವಾಗುವುದು. ಹಾಗೆಂದು ಮಾತಾಮಹರ ಹಾನಿಗೆ ತಾನು ಕಾರಣವಾಗುವುದೂ ಸರಿಯಲ್ಲ. ಅದು ಮಾತೃದ್ರೋಹವಾದೀತು. ಬಿಟ್ಟು ಹೋದರೆ ಪಿತೃದ್ರೋಹ, ಬಿಡದಿದ್ದರೆ ಮಾತೃದ್ರೋಹ. ಏನುಮಾಡಬೇಕು ?” ಎಂದು ಬಹಳ ಹೊತ್ತು ಯೋಚಿಸಿ, ಕೊನೆಗೆ ಇತ್ಯರ್ಥಕ್ಕೆ ಬಂದನು. ಹೇಳಿದನು : “ವಿರೂಪಾಕ್ಷ, ನೀನು ಹೋಗಿ ಅಸುರೇಂದ್ರರಿಗೆ ನನ್ನ ನಮಸ್ಕಾರಗಳೊಡನೆ ಬಿನ್ನವಿಸು. ನಿಮಗೆ ಗೊತ್ತಿರುವಂತೆ ನನಗೆ ನಿದ್ದೆಯಿಲ್ಲ. ಪ್ರತಿದಿನವೂ ಸಮರಾತ್ರಿಗೆ ಸರಿಯಾಗಿ ಒಂದು ಯಜ್ಞವನ್ನು ಮಾಡುವೆನು. ಆ ಯಜ್ಞವನ್ನು ನಿಮಗಾಗಿ ನಿಮ್ಮ ಸಂವೃದ್ಧಿಗಾಗಿ, ನಿಮ್ಮ ಶ್ರೇಯಃಪ್ರೇಮಸ್ಸಾಧನೆಗಾಗಿಯೇ ಮಾಡುವೆನು. ಅದು ಸಂಚಿತವಾಗಿದ್ದು ಯಾವಾಗಲೋ ನಿಮಗೆ ಫಲವನ್ನು ಕೊಡುವುದು. ಇನ್ನು ಮುಂದೆ ನನ್ನನ್ನು ಒತ್ತಬಾರದು. ಇದಿಷ್ಟರಿಂದ ತೃಪ್ತರಾಗಿ ನನ್ನನ್ನು ಮಾತೃಋಣದಿಂದ ಮುಕ್ತನಾಗುವಂತೆ ಅನುಗ್ರಹಿಸಬೇಕು ಎಂದು ಹೇಳು ಹೋಗು” ಎಂದನು.

ವಿರೂಪಾಕ್ಷನಿಗೆ ಸಂತೋಷವಾಯಿತು. “ವಿಶ್ವರೂಪ, ನೀನು ನಿಜವಾಗಿಯೂ ನಮ್ಮ ಮೇಲೆ ಅಭಿಮಾನವುಳ್ಳವನು. ಸಂದೇಹವಿಲ್ಲ. ಆದರೆ, ನಾವು ದೇವತೆಗಳಂತೆ ಎಲ್ಲೆಂದರಲ್ಲಿ ಯಾವಾಗ ಎಂದರೆ ಆಗ ಬರಲಾರೆವು. ಅದರಿಂದ ದಿನದಿನವೂ ಅರ್ಧರಾತ್ರಿಯಲ್ಲಿ ಬಂದು ನಮ್ಮ ಹವಿರ್ಭಾಗವನ್ನು ತೆಗೆದುಕೊಂಡು ಹೋಗಲಪ್ಪಣೆ ಕೊಡು" ಎಂದನು.

ವಿಶ್ವರೂಪನು ತಲೆಯಲ್ಲಾಡಿಸಿದನು. “ನೀನು ಅಮರಾವತಿಯ ವ್ಯವಸ್ಥೆಯನ್ನು ಅರಿಯದವನಂತೆ ಹೇಳುವೆ. ಅದು ಸಾಧ್ಯವಿಲ್ಲ. ಸಮರಾತ್ರಿಯಲ್ಲಿ ಅದೇವತೆಯು ಪುರಪ್ರವೇಶ ಮಾಡಿದರೆ ಅಮರಾವತಿಯು ಅವನನ್ನು ನುಂಗಿಬಿಟ್ಟೀತು. ಅದರಿಂದ ನೀವು ಅನಧ್ಯಯನದ ದಿನಗಳಲ್ಲಿ ಬನ್ನಿ, ಕಾಲ ಪ್ರಚೋದಿತವಾಗಿ ಮೋಡಮುಚ್ಚಿ ಸೂರ್ಯರಶ್ಮಿ ಕಾಣದ ದಿನಗಳಲ್ಲಿ ಬಂದು ನಿಮ್ಮ ನಿಮ್ಮ ಹವಿರ್ಭಾಗಗಳನ್ನು