ಪುಟ:Mahakhshatriya.pdf/೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ತೆಗೆದುಕೊಂಡು ಹೋಗಿ. ಪುರಪ್ರವೇಶ ಮಾಡುವಾಗ ‘ಇಂತಹ ಕಡೆಗೇ ಹೋಗುವೆವು. ನಾವು ಇಂಥವರು’ ಎಂದು ಧೈರ್ಯವಾಗಿ ಹೇಳಿ, ಉದ್ದೇಶವನ್ನು ಮಾತ್ರ ಹೇಳಬೇಡಿ” ಎಂದು ಹೇಳಿ ಆತನಿಗೆ ಸಲ್ಲಬೇಕಾದ ಗೌರವಗಳನ್ನೆಲ್ಲ ಸಲ್ಲಿಸಿ, ಆತನನ್ನು ಬೀಳ್ಕೊಟ್ಟನು.

ಅಲ್ಲಿರುವ ಕಂಭದೊಳಗೆ ಇದ್ದುಕೊಂಡಿದ್ದು ಅದೆಲ್ಲವನ್ನೂ ಕೇಳಿದ ದೇವತೆಯೊಬ್ಬನು ವಿಶ್ವರೂಪಾಚಾರ್ಯನು ಕಣ್ಮುಚ್ಚಿ ಧ್ಯಾನಪರನಾಗಿರುವಾಗ ಈಚೆಗೆ ಬಂದು, ಓಡಿ ಹೋಗಿ ನಡೆದುದೆಲ್ಲವನ್ನು ದೇವೇಂದ್ರನಿಗೆ ಅರಿಕೆ ಮಾಡಿದನು.

ಆತನೂ ಒಂದು ಗಳಿಗೆ ಯೋಚನೆಮಾಡಿ, “ದಿನದಿನವೂ ನಡೆಯುವ ವಿಷಯ. ಚತುರ್ಮುಖನವರೆಗೂ ಹೋಗಬೇಕಾಗಿಲ್ಲ. ನಾನೇ ಇದನ್ನು ಇತ್ಯರ್ಥಮಾಡಬೇಕು. ಮಾಡೋಣ” ಎಂದು ಸುಮ್ಮನಾದನು.

* * * *