ಪುಟ:Mahakhshatriya.pdf/೨೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಇಂದ್ರನು ಮೆತ್ತಗಾಗಿ, ಮರುಮಾತಾಡದೆ, “ಆಗಬಹುದು” ಎಂದನು. ನಿಯತಿಯು ಹಸನ್ಮುಖಳಾಗಿ ಇಂದ್ರನಿಗೆ ಮತ್ತೆ ನಮಸ್ಕರಿಸಿ ಬೀಳ್ಕೊಂಡಳು. ಇಂದ್ರನು ಅಲ್ಲಿಯೇ ಶತಪಥ ತಿರುಗುತ್ತ. “ಹೌದು, ಸ್ವರ್ಗಮತರ್ಯ್‌ಪಾತಾಳಗಳಲ್ಲೆಲ್ಲಾ ಮೃತ್ಯುವಿನ ಮೆರವಣಿಗೆ. ಮೊದಲು ಕೊನೆಯೆರಡೂ ಇಲ್ಲವಾಗುವುದು ಕಲ್ಪಾಂತರದಲ್ಲಿ. ಮತರ್ಯ್‌ಲೋಕದಲ್ಲಿ ದಿನದಿನವೂ ಅಲ್ಲ. ಗಳಿಗೆ ಗಳಿಗೆಯೂ, ಹುಟ್ಟಿದುದೆಲ್ಲ ಹೆಜ್ಜೆಯನ್ನು ಸಾವಿನ ಕಡೆಗೆ ಇಡುತ್ತಿರುವಾಗ ಪೂರ್ಣವಾಗುವುದೆಲ್ಲಿ ಬಂತು ? ಇಷ್ಟಕ್ಕೂ ಏಳು ದಿನವಂತೂ ಶಿಬಿಕೋತ್ಸವವು ನಡೆದೇ ನಡೆಯುವುದು. ಕೊನೆಯಲ್ಲಿ ಅಷ್ಟು ಭಂಗವಾದರೆ ನಮಗೇನು ಹಾನಿ ?” ಎಂದು ಸಮಾಧಾನಪಟ್ಟುಕೊಂಡನು.

ಹಾಗೆಯೇ ಅದೇ ಚಿತ್ತವೃತ್ತಿಯಲ್ಲಿರುವಾಗ ವಿರಜಾದೇವಿಯು ಬಂದು ಕಾಣಿಸಿಕೊಂಡು, “ಶಚೀಂದ್ರರು ಬರುವ ಕಾಲವಾಯಿತು. ಅವರನ್ನೆಲ್ಲಿ ನೋಡುವಿರಿ?” ಎಂದಳು.

ನಹುಷನು ವಿರಜಾದೇವಿಯ ಭುಜದ ಮೇಲೆ ಸ್ನೇಹದಿಂದ ಕೈಯಿಟ್ಟು “ಆ ದಂಪತಿಗಳನ್ನು ಈ ದಂಪತಿಗಳು ನಿನ್ನ ಅಪ್ಪಣೆಯಾದರೆ ನಿನ್ನ ಅಂತಃಪುರದಲ್ಲಿ ಕಾಣುವರು” ಎಂದನು.

ವಿರಜಾದೇವಿಯು ಸಮೀಪಗತಳಾಗಿ ಆತನ ವಿಶಾಲವಾದ ಎದೆಯಲ್ಲಿ ಹುದುಗಿಕೊಳ್ಳುವಂತೆ ತನ್ನ ಮೊಗವನ್ನಿಟ್ಟು “ತಾವು ಅಪ್ಪಣೆ ಕೊಡಿಸಿದುದು ಸರ್ವಥಾ ಸರಿ. ಇಂದ್ರದಂಪತಿಗಳು ಈಗ ದೂರದವರಲ್ಲ. ಅವರನ್ನು ಅಂತಃಪುರದಲ್ಲಿ ಅಲ್ಲದೆ ಇನ್ನೆಲ್ಲಿ ಕಂಡರೂ ದೂರಮಾಡಿದರೆಂದು ನೊಂದುಕೊಂಡಾರು. ಸರಿ ದಯಮಾಡಿಸಿ” ಎಂದು ಗಂಡನನ್ನು ಅಂತಃಪುರಕ್ಕೆ ಕರೆದೊಯ್ದಳು.

ದಂಪತಿಗಳು ಇಬ್ಬರೂ ಮಾತನಾಡಿಕೊಂಡು ಇಂದ್ರದಂಪತಿಗಳನ್ನು ಸ್ವಾಗತಿಸಲು ಸಿದ್ಧರಾದರು. ಬಂದವರಿಗೆ ಮಂಗಳಾರತಿ ಮಾಡಲು ರತ್ನದ ಹರಿವಾಣವು ಸಿದ್ಧವಾಯಿತು. ಕಲ್ಪವೃಕ್ಷವು ಕೊಟ್ಟ ದುಂಡುಮೊಗ್ಗಿನ ಹಾರಗಳು ಸಿದ್ಧವಾದವು. ಕಾಣಿಕೆಯಾಗಿ ಚಿಂತಾಮಣಿಯು ಕೊಟ್ಟ ರತ್ನಾಭರಣಗಳು ಸಿದ್ಧವಾದವು. ದಂಪತಿಗಳು ಕುಳಿತುಕೊಳ್ಳಲು ರತ್ನಾಸನವು ಅಣಿಯಾಯಿತು. ಹೀಗೆ ಸರ್ವಸನ್ನದ್ಧರಾಗಿ ಕಾದರು.

ಸಕಾಲದಲ್ಲಿ ಶಚೀಂದ್ರರು ಬಂದರು. ಸಾಮಾನ್ಯವಾದ ವೇಷಭೂಷಣಗಳಿಂದ ಬಂದಿದ್ದಾರೆ. ಇಂದ್ರನು ಒಂದು ಪೀತಾಂಬರವನ್ನು ಉಟ್ಟಿದ್ದಾನೆ. ಇನ್ನೊಂದನ್ನು ಹೊದೆದಿದ್ದಾನೆ. ತಲೆಯ ಮೇಲೆ ಹೇಮಕಿರೀಟವೊಂದಿದೆ. ದೇವಸಹಜವಾದ