ಪುಟ:Mahakhshatriya.pdf/೨೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

“ಹಾಗಾದರೆ ಸ್ಥಿತಿಯು ಈಗಿರುವಂತೆಯೇ ಇರಬೇಕು. ಅದಕ್ಕಾಗಿ ತಾವು ಶಿಬಿಕೋತ್ಸವವನ್ನು ಏಳು ದಿನ ನಡೆಸಬಾರದು. ಮೂರು ದಿನಕ್ಕೆ ನಿಲ್ಲಿಸಿ ಬಿಡಬೇಕು.”

“ಅದು ಸಾಧ್ಯವಿಲ್ಲ. ಶಿಬಿಕೋತ್ಸವವು ಒಂದುವಾರ ನಡೆದೇ ನಡೆಯುವುದು. ಅದು ಹಾಗೆಂದು ಇತ್ಯರ್ಥವಾಗಿರುವುದು ಇಲ್ಲಿ ; ಸಪ್ತರ್ಷಿಗಳ ಸನ್ನಿಧಿಯಲ್ಲಿ ಇಂದ್ರನು ಗೊತ್ತು ಮಾಡಿರುವುದನ್ನು ಬದಲಾಯಿಸಲು ಸಾಧ್ಯವಿಲ್ಲ.”

ನಿಯತಿಯು ಹೆದರಿ ಎದ್ದು ಕೈಮುಗಿದು ಹೇಳಿದಳು : “ಸ್ವಾಮಿ ಒಂದು ಆಜ್ಞೆಯು ಇನ್ನೊಂದು ಆಜ್ಞೆಯನ್ನು ಭಂಗಿಸಬಾರದು. ಹಾಗಾಗುವುದಾದರೆ, ಆಜ್ಞಾನಿರ್ವಾಹಕರು ಸ್ವಾಮಿಗೆ ಅದನ್ನು ಬಂದು ನಿವೇದಿಸಬೇಕು. ಅದನ್ನು ಸರಿಮಾಡುವುದು ಸ್ವಾಮಿಯ ಕೆಲಸ. ಅದರಿಂದ ಬಂದು ಬಿನ್ನವಿಸಿದ್ದೇನೆ.”

“ಏನಾದರೊಂದು ಉಪಾಯವನ್ನು ಹೇಳು. ನಮ್ಮ ಆಜ್ಞಾನಿರ್ವಾಹಕರು ಯಾಂತ್ರಿಕಪುರುಷರಲ್ಲ.”

“ದೇವ, ಶಿಬಿಕೋತ್ಸವವು ಏಳು ದಿನಗಳು ಪೂರ್ಣವಾಗಿ ನಡೆಯದಂತೆ ನಾವೊಂದು ಅಡ್ಡಿಯನ್ನು ತಂದೊಡ್ಡಲು ಅಪ್ಪಣೆಯಾಗಬೇಕು. ಯಾವುದೂ ಈ ಲೋಕದಲ್ಲಿ ಪೂರ್ಣವಾಗಬಾರದು. ಅಪೂರ್ಣವಾಗಿಯೇ ಉಳಿಯಬೇಕು. ಇದು ಬ್ರಹ್ಮನಿಯಮ. ಸನ್ನಿಧಾನವು ಅದಕ್ಕೆ ವಿರುದ್ಧವಾಗಿ ನಡೆಯಬಾರದು.”

“ಹಾಗಲ್ಲ. ತಮ್ಮನ್ನು ಅದಕ್ಕೆ ವಿರುದ್ಧವಾಗಿ ನಡೆಯಬಿಡುವುದಿಲ್ಲ ಎನ್ನು.”

“ಅದೇ ನಿಜವಾದರೂ ಈಗ ತಾವು ಆಜ್ಞಾಪಕರು. ನಾವು ನಿರ್ವಾಹಕರು. ಅದರಿಂದಾಗಿ ವರವಾಗಿ ಕೇಳುವೆವು.”

“ಕೊಡದಿದ್ದರೆ, ತುಂಟ ಹಸುವನ್ನು ಕಟ್ಟಿ ಕರೆಯುವಂತೆ ವರವನ್ನು ಕಿತ್ತುಕೊಳ್ಳುವೆವು. ಇಲ್ಲವೆ ?”

ನಿಯತಿಯು ಉತ್ತರ ಕೊಡಲಿಲ್ಲ. ನಕ್ಕು ತಲೆಯನ್ನು ಬಗ್ಗಿಸಿದಳು. ಅದೇ ಉತ್ತರವಾಯಿತು.

“ಹೌದು ನೀವು ಆಜ್ಞಾವಾಹಕರು. ಆದರೆ, ಸಲ್ಲುವ ಆಜ್ಞೆಯನ್ನು ಮಾತ್ರವೇ ಮಾಡಬೇಕಾದುದು ನಮ್ಮ ಗೌರವ. ಆಯಿತು. ಈಗೇನು ಮಾಡಬೇಕು, ನಿಯತಿ?”

“ಸ್ವಾಮಿಗೆ ಸಮ್ಮತವಾದರೆ ಏಳನೆಯ ದಿನ, ಶಿಬಿಕೆಯಲ್ಲಿರುವಾಗಲೇ ತಾವು ಸಮಾಧಿ ಭಂಗಮಾಡಿಕೊಳ್ಳಬೇಕು. ಅದರಿಂದ ತಮ್ಮ ಸನ್ನಿಧಿಗೆ ಕೊಂಚ ಶ್ರಮವಾಗಬಹುದು. ಆದರೂ ಲೋಕವು ಉಚ್ಛೃಂಖಲವಾಗುವುದಿಲ್ಲ. ಇಲ್ಲದಿದ್ದರೆ ತುಟಿ ಮೀರಿದ ಹಲ್ಲಾಗುವುದು. ಅದರಿಂದ, ನನಗೆ ಈ ವರವನ್ನು ಕೊಡಬೇಕು” ಎಂದು ನಿಯತಿದೇವಿಯು ಇಂದ್ರನಿಗೆ ನಮಸ್ಕಾರ ಮಾಡಿದಳು. ವರವೆನ್ನುತ್ತಲೂ