ಪುಟ:Mahakhshatriya.pdf/೨೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಅಂದು ಜಗ್ಗುಹಾಕಿಕೊಂಡು ನಡೆಯುತ್ತಿದ್ದಾರೆ. ಎಲ್ಲರೂ ಆಶ್ಚರ್ಯ- ನೂರಾರು ಮಂದಿ ಹೊತ್ತಿದ್ದಾಗ ಮಂದಗಮನದಲ್ಲಿ ಹೋಗುತ್ತಿದ್ದ ಪಲ್ಲಕ್ಕಿಯು ಅದಕ್ಕೆ ರೆಕ್ಕೆಗಳು ಹುಟ್ಟಿದಂತೆ ಓಡುವಂತೆ, ತೀವ್ರಗಾಮಿನಿಯಾಗಿದೆ.

ಅರ್ಧದೂರ ಬಂದಿದೆ. ಎಲ್ಲರೂ ಶಿಬಿಕೆಯಲ್ಲಿರುವ ಅರಸನನ್ನು ನೋಡಿ “ಈ ಮುದ್ರಿಕೆ ಇತರರಿಗೆ ಸಾಧ್ಯವೇ?” ಎಂದು ಆಶ್ಚರ್ಯಪಡುತ್ತಿದ್ದಾರೆ. ಇಂದ್ರನೂ “ಇಂತಹ ಭಾಗ್ಯವು ಇನ್ನು ಯಾರಿಗುಂಟು?” ಎಂದು ವಿಸ್ಮಿತನಾಗಿದ್ದಾನೆ. ಹೀಗೆ ಎಲ್ಲರೂ ವಿಸ್ಮಯಾವಿಷ್ಟರಾಗಿರುವಾಗ, ಅರಸನಿಗೆ ಸಮಾಧಿಯು ಶಿಥಿಲವಾಯಿತು. ಸಪ್ತರ್ಷಿಗಳು ‘ಓಂ’ ಎಂದು ಸಿಂಹನಾದ ಮಾಡಿ, ತಾವು ಹೊತ್ತಿದ್ದ ಪಲ್ಲಕ್ಕಿಯನ್ನು ಅತ್ತ ಎಸೆದರು. ಪಲ್ಲಕ್ಕಿಯಲ್ಲಿದ್ದ ಅರಸನು ಮೂರು ಉರುಳು ಉರುಳಿ ಭೂಗತನಾದನು.

ಎಲ್ಲರೂ ಹಾಹಾ ಎಂದು ಓಡಿಬಂದರು. ಇಂದ್ರ, ವಾಯು, ಯಯಾತಿ, ಅಗ್ನಿ, ಸುರಗುರು, ಶುಕ್ರಾಚಾರ್ಯ, ಶಚಿ, ವಿರಜ, ಎಲ್ಲರೂ ಓಡಿ ಬಂದು ಅರಸನನ್ನು ಸುತ್ತಿಕೊಂಡರು. ಸಪ್ತರ್ಷಿಗಳು ನಿಶ್ಯಂಕರಾಗಿ ಮೌನವಾಗಿ ನಿಂತಿದ್ದಾರೆ. ಇಂದ್ರಾದಿಗಳು “ಏನಾಯಿತು” ಎಂದು ಅವರನ್ನು ಕೇಳಿದರು. ಅವರು ನಹುಷನನ್ನು ತೋರಿಸಿದರು. ಅರಸನು ಆ ವೇಳೆಗೆ ಆಕಸ್ಮಿಕವಾಗಿ ಬಿದ್ದ ಘಾತದ ಪ್ರತಿಕ್ರಿಯೆಯನ್ನು ಸಂರೋಧಮಾಡಿಕೊಂಡು ಎದ್ದಿದ್ದಾನೆ. “ಈ ಅಪಘಾತದ ಪ್ರತಿಯಾಗಿ ಇನ್ನೇನು ಆಗಿಹೋಗುವುದೋ !” ಎಂದು ಎಲ್ಲರೂ ಹೆದರಿದ್ದಾರೆ. ಅರಸನು ಮೈ ಕೈ ಒರೆಸಿಕೊಳ್ಳುತ್ತಾ “ಸಪ್ತಋಷಿಗಳು ಮಾಡಿದುದು ಸರಿ” ಎಂದು ಅವರಿಗೆ ಕೈಮುಗಿಯುತ್ತಾನೆ.

ಎಲ್ಲರೂ ಇನ್ನೂ ಅಷ್ಟು ವಿಸ್ಮಿತರಾದರು. ಅರಸನು ಅವರೆಲ್ಲರನ್ನೂ ಸಮಾಧಾನಮಾಡುತ್ತ “ಶಿಬಿಕಾರೋಹಣ ಕಾಲದಲ್ಲಿ ನಿರ್ವಿಕಲ್ಪ ಸಮಾಧಿಯಲ್ಲಿ ಇರಬೇಕು ಎಂದು ನನಗೆ ಅಪ್ಪಣೆಯಾಗಿತ್ತು. ಏಳು ದಿನದ ಶಿಬಿಕೋತ್ಸವವು ಪರಿಪೂರ್ಣವಾಗಕೂಡದೆಂದು ನಿಯತಿದೇವಿಯು ವಿಧಿಸಿದ್ದಳು. ಅದರಂತೆ ಈ ದಿನ ಶಿಬಿಕೋತ್ಸವವು ಪೂರ್ಣವಾಗುವುದಕ್ಕಿಂತ ಮುಂಚೆ, ನನಗೆ ಸಮಾಧಿಯು ಶಿಥಿಲವಾಯಿತು. ಶಿಥಿಲ ಸಮಾಧಿಯಾದವನು ಸಪ್ತಋಷಿಗಳು ಹೊತ್ತಿರುವ ಶಿಬಿಕೆಯಲ್ಲಿ ಕುಳಿತಿರುವಂತಿಲ್ಲ. ಅದರಿಂದ ಅವರು ಶಿಬಿಕೆಯನ್ನೇ ಎತ್ತಿ ಎಸೆದರು. ಶಿಬಿಕೆಗೇನಾಗಿದೆಯೋ ನೋಡಿ” ಎಂದನು. ಶಿಬಿಕೆಯು ಕುಂದಣದ ಕೆಲಸದಿಂದ ಆದುದು, ಅದಕ್ಕೆ ಏನೂ ಆಗಿರಲಿಲ್ಲ.

ಅರಸನು ನೇರವಾಗಿ ಸಪ್ತರ್ಷಿಗಳ ಬಳಿಗೆ ಹೋದನು. ನಮಸ್ಕಾರಮಾಡಿ