“ಮಹಾಸ್ವಾಮಿ ! ಇಂತಹದೊಂದು ಕಾಲ ಬಂದೀತೆ ಎಂದು ಕಾದಿದ್ದೆವು. ಈ ದೇವತೆಗಳಿಗೆ ಈಗ ನಡುಮುರಿಯುವಂತಹ ಏಟು ಹೊಡೆದು, ದೇವತೆಗಳು ಎಂದರೆ ದಾನವೇಂದ್ರರ ಮನೆಯ ಪಶುಗಳು ಎನ್ನುವಂತೆ ಮಾಡಬೇಕು” ಎಂದು ಮುಂತಾಗಿ ತಮ್ಮ ಹೊಟ್ಟೆಯಲ್ಲಿರುವ ದ್ವೇಷವನ್ನೆಲ್ಲ ತೋಡಿಕೊಳ್ಳುತ್ತಾರೆ. ವೃತ್ರಾಸುರನು ನಗುತ್ತ ಆಗಲಿ ಏನೇನು ಮಾಡುವಿರೋ ನೋಡೋಣ. ನನಗೆ ಅವರ ಶಕ್ತಿಬಲಪರಾಕ್ರಮಗಳು ಎಷ್ಟು ಎನ್ನುವ ಯೊಚನೆಯೂ ಬೇಕಾಗಿಲ್ಲ. ಪರ್ವತವು ಎದ್ದು ಓಡಾಡುವುದು ಎನ್ನಿ, ದಾರಿಯಲ್ಲಿರುವ ಪಟ್ಟಣಗಳಲ್ಲಿ ಎಂತಹ ದೊಡ್ಡ ದೊಡ್ಡ ಮನೆಗಳು ಇವೆ ಎಂದು ಯೊಚಿಸುವುದೇನು ? ಹಾಗೆ ಎನ್ನಿ ನಾನು ಒಂದು ಸಮಯವನ್ನು ಕಾಯುತ್ತಿದ್ದೇನೆ. ಈಗ ನಾನು ಐರಾವತದ ಎರಡರಷ್ಟು ಬಲವಾಗಿದ್ದೇನೆ. ಇದು ಇನ್ನೂ ಐದು ಪಟ್ಟು ಬೆಳೆಯಬೇಕು. ಅದಕ್ಕೇನು, ಅಬ್ಬಬ್ಬಾ ಎಂದರೆ ಒಂದು ವರ್ಷವಾದೀತೆ? ಒಂದೇ ಏಟು ಬರಿಯ ಕೈಯಲ್ಲಿ ಹೊಡೆದರೆ, ಐರಾವತವೂ ಅದನ್ನೇರಿರುವ ಇಂದ್ರನೂ ಹತ್ತು ಸಲ ಉರುಳಿ ಬೀಳಬೇಕು. ಹಾಗೆ ನಾನಾಗಬೇಕು. ಈ ಅಗ್ನಿ, ಯಮ, ವರುಣ ಮೊದಲಾದವರೆಲ್ಲ ನನ್ನನ್ನು ಕಂಡರೆ ಓಡಬೇಕು, ಹಾಗೆ ಮಾಡಬೇಕು. ಕಾದಾಡಿ ಗೆಲ್ಲುವುದು ಏನು ಮಹಾ !” ಎನ್ನುತ್ತಾನೆ.
ವೃತ್ರನು ಅವನು ಹೇಳಿದಂತೆಯೇ ಮಾಡಬಲ್ಲನೆಂಬುದಕ್ಕೆ ಅವನ ಆಕಾರವೇ ಸಾಕ್ಷಿ. ಈಗಾಗಲೇ ಒಂದು ಆನೆಯಷ್ಟು ಇದ್ದಾನೆ. ಅವನು ದಿನವೂ ಬೆಳೆಯುತ್ತಿರುವುದು ಸೊಂಪಾಗಿ ಬೆಳೆಯುವ ಗಿಡದ ಬೆಳವಣಿಗೆಯಂತೆ ಬರಿಯ ಕಣ್ಣಿಗೇ ಕಾಣಿಸುತ್ತಿದೆ. ಅವನ ತೋಳುಗಳು ಆನೆಗಳ ಕಾಲುಗಳಂತೆ ಇವೆ. ತಲೆಯು ಪರ್ವತದ ಗುಂಡು ಬಂಡೆಯಂತೆ ಇದೆ. ಅವನು ನಡೆಯುತ್ತಿದ್ದರೆ ಸಾಮಾನ್ಯ ಭೂಮಿಯು ಹಳ್ಳ ಬಿದ್ದುಹೋಗುತ್ತದೆ. ಈಗ ಅವನು ನಡೆದಾಡುವ ಕಡೆಗೆ ದಾನವರು ಬಂಡೆಗಳನ್ನೂ ಕಲ್ಲುಗಳನ್ನೂ ಹಾಕಿ ಭದ್ರವಾದ ರಾಜವೀಧಿಯನ್ನು ಮಾಡಿದ್ದಾರೆ. ದಿನವೊಂದಕ್ಕೆ ನೂರು ಜನ ರಾಕ್ಷಸರಿಗೆ ಆಗುವ ಊಟ ಅವನಿಗೊಬ್ಬನಿಗೇ ಬೇಕು. ಅವನು ಮಲಗಲು ರತ್ನಖಚಿತವಾದ ಮಂಚಗಳು ತಡೆಯದೆ, ಅವನಿಗೆಂದೇ ವಿಶೇಷವಾಗಿ ಮಂಚವನ್ನೂ ಹಾಗೆಯೇ ಕೂರಲು ವಿಶೇಷವಾದ ಆಸನವನ್ನೂ ದಾನವಶಿಲ್ಪಿಯು ರಚಿಸುತ್ತಿದ್ದಾನೆ.
ದಾನವಲೋಕದಲ್ಲಿ ಎಲ್ಲರಿಗಿಂತ ಸಂತೋಷಪಡುವವನೆಂದರೆ ಶುಕ್ರಾಚಾರ್ಯ. ಆತನು ದಿನದಿನವೂ ಬಂದು ವೃತ್ರಾಸುರನಿಗೆ ‘ದೇವತೆಗಳಿಗಿಂತ ಹೆಚ್ಚಿನ ವೈಭವದಿಂದ ಬಾಳು. ಅತೀಂದ್ರನಾಗು' ಎಂದು ಹರಕೆ ಹೊತ್ತು ಆಶೀರ್ವಾದ