ಪುಟ:Mahakhshatriya.pdf/೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಇನ್ನು ನಾಲ್ವರು ದೀಕ್ಷಿತರು ದೇವೋತ್ತೇಜಕ ಮಂತ್ರಗಳಿಂದ ಹೋಮ ಮಾಡುತ್ತಿದ್ದಾರೆ. ಅಲ್ಲಿಯೇ ಮತ್ತೊಂದು ಕಡೆಯಲ್ಲಿ ಅಭಿಮಂತ್ರಿತವಾದ ಸಾಂತ್ಯುದಕವನ್ನು ಧರಿಸಿರುವ ಕಲಶಗಳು ಸಿದ್ಧವಾಗಿವೆ. ಅಲ್ಲಿಗೆ ಬರುತ್ತಲೂ ದೇವಗುರುವಿನ ದರ್ಶನ, ರಕ್ಷೋಘ್ನಮಂತ್ರಗಳ ಶ್ರವಣ ಮೊದಲಾದವುಗಳಿಂದ ದೇವರಾಜನು ಸ್ವಸ್ಥನಾಗಿದ್ದಾನೆ. ಆ ಚಿತ್ತಭ್ರಾಂತಿಯು ಅರ್ಧಭಾಗ ಕಡಿಮೆಯಾಗಿದೆ. ದೇವಗುರುಗಳಿಗೆ ನಮಸ್ಕಾರ ಮಾಡಿ, ಒಂದೆಡೆಗೆ ಕೈಮುಗಿದು ನಿಲ್ಲುತ್ತಾನೆ.

ದೇವಗುರುವು ಇಂದ್ರನ ಮುಖವನ್ನು ನೊಡುತ್ತಿದ್ದ ಹಾಗೆಯೇ, ಆತನ ಮನಃಕ್ಷೋಭವನ್ನು ಅರಿತಿದ್ದಾನೆ. ಪಕ್ಕದ ಆಸನದಲ್ಲಿ ಆತನನ್ನು ಕುಳ್ಳಿರಿಸಿ, ಒಳಗಿನಿಂದ ಸಾಂತ್ಯುದಕದ ಕಲಶವೊಂದನ್ನು ತರಿಸಿ, ತಾನೇ ತೆಗೆದುಕೊಂಡು ಅದರಿಂದ ದೇವೇಂದ್ರನಿಗೆ ಸಂಪ್ರೋಕ್ಷಣ ಮಾಡುತ್ತಾನೆ. ದೇವೇಂದ್ರನ ಅಂತಭ್ರಾಂತಿಯು ನಿವಾರಣವಾಗಿ ಆತನು ಸ್ವಸ್ಥನಾಗುತ್ತಾನೆ.

ದೇವೇಂದ್ರನು ಮತ್ತೆ ನಗುನಗುತ್ತ “ದೇವಗುರುಗಳಲ್ಲಿ ಪ್ರಸ್ತಾಪಿಸಬೇಕಾದ ವಿಷಯವೊಂದಿತ್ತು” ಎನ್ನುತ್ತಾನೆ. ಕೂಡಲೇ ದೇವಗುರುವೂ ದೇವೇಂದ್ರನೂ ಅಂತರ್ಗೃಹಕ್ಕೆ ಹೋಗುತ್ತಾರೆ. ಬಾಗಿಲಲ್ಲಿ ದೌವ್ವಾರಿಕನು ಬಾಗಿಲನ್ನು ಮುಚ್ಚಿಕೊಂಡು ಕಾವಲು ನಿಲ್ಲುತ್ತಾನೆ.

ದೇವಗುರುವು ಏಕಾಂತದಲ್ಲಿ ಕೇಳುತ್ತಾನೆ : “ಮಹೇಂದ್ರ ಏನಾಗಿದೆ ? ಏನೋ ಗಾಬರಿಪಟ್ಟಿರುವಂತಿದೆ, ಪಾತಾಳದಲ್ಲಿ ಭಯಂಕರವಾದ ಸುದ್ದಿಯೇನಾದರೂ ಬಂತೋ ?”

ಮಹೇಂದ್ರನಿಗೆ ಕಣ್ಣು ಮುಚ್ಚಿಕೊಂಡು ಕಿಂಚಿತ್ತೂ ಮನೋಭೀತಿಯಿಲ್ಲದಂತೆ ಮಾತನಾಡಬೇಕೆಂದು ಇಷ್ಟ. ಅಲ್ಲದೆ, ದೇವಗುರುವಿನ ಸನ್ನಿಧಾನದಲ್ಲಿ ಮನಸ್ಸು ಸ್ವಸ್ಥವಾಗಿದೆ. ಆದರೂ ಅಂತಸ್ಥವಾದ ಭೀತಿಯನ್ನು ಊದಿ ಪುಟಗೊಳಿಸುವ ‘ತಾನು ಅಪರಾಧಿ’ಯೆಂಬ ಭಾವವು ಬಲವಾಗಿರಲು, ವಿಕಲನಾಗದಿರುವುದೆಂತು? ಏನೋ ನಿರ್ದಿಷ್ಟವಲ್ಲದ ಹೆದರಿಕೆಯಿಂದ ಹೇಳಿದನು ; “ಗುರುಸನ್ನಿಧಾನದಲ್ಲಿಯೂ ಮುಚ್ಚಿಡಲೇಕೆ ? ನನಗೆ ವೃತ್ರಭೀತಿಯು ಬಹಳವಾಗಿದೆ.”

ದೇವಗುರುವು ನಕ್ಕನು : “ಹೌದು, ಆಗಬೇಕಾದುದೇ! ಅವನೂ ದೇವತೆಗಳನ್ನು ಗೆದ್ದು ದೇವಲೋಕವನ್ನು ತನ್ನದು ಮಾಡಿಕೊಳ್ಳಲು ಎಲ್ಲಾ ಸನ್ನಾಹಗಳನ್ನು ಮಾಡಿಕೊಳ್ಳುತ್ತಿದ್ದಾನೆ.”

“ಫಲಿತಾಂಶವು ಏನಾಗಬಹುದು, ಗುರುವರ್ಯಾ ?”

“ಶಕುನಗಳು ನಮಗೆ ಚೆನ್ನಾಗಿಲ್ಲ ಯುದ್ಧದಲ್ಲಿ ನಾವು ಸೋಲಬಹುದು.”