ಪುಟ:Mahakhshatriya.pdf/೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ನಿನ್ನ ಬೆನ್ನಮೂಳೆಯನ್ನು ಕೊಟ್ಟೆಯಂತೆ!

“ಹೌದು.”

“ಅದರಿಂದಾಗುವ ಅನರ್ಥವನ್ನು ಬಲ್ಲೆಯಾ ?”

“ನನಗೆ ಅರ್ಥವೂ ಅನರ್ಥವೇ! ಅನರ್ಥವೂ ಅರ್ಥವೇ! ಈಗ ಬಹುಕಷ್ಟದಿಂದ ನಾನು ನೀನು ಎಂಬ ಭೇದವನ್ನು ಕಲ್ಪಿಸಿಕೊಂಡು ಮಾತನಾಡುವ ಅವಸ್ಥೆಯಲ್ಲಿ ಇದ್ದೇನೆ. ನಿನಗೇನಾಗಬೇಕು ಹೇಳು?”

ತ್ವಷ್ಟೃವು ಆ ಮಾತು ಕೇಳಿ ದಿಗಿಲಿನಿಂದ ಹೇಳಿದನು : “ದೇವ, ನಾನು ಈ ಇಂದ್ರನನ್ನು ಕೊಲ್ಲಲು ಒಂದು ಕೃತ್ಯ ಮಾಡಿದ್ದೇನೆ. ಅದನ್ನು ಈಗ ಯಾವ ಅಸ್ತ್ರಶಸ್ತ್ರಗಳಿಂದಲೂ ಹೊಡೆಯಲಾಗುವುದಿಲ್ಲವೆಂದು ಈ ಕಳ್ಳನು ನಿನ್ನ ಬಳಿಗೆ ಬಂದು, ತಪಃಪವಿತ್ರವಾದ ನಿನ್ನ ಶರೀರದಿಂದ ಮೂಳೆಯನ್ನು ಕೇಳಿದ್ದಾನೆ. ಅದರಿಂದ ಅವನು ಅದನ್ನು ಹೊಡೆದರೆ ನನ್ನ ಕಷ್ಟವೆಲ್ಲ ವ್ಯರ್ಥವಾಗುವುದು.”

ದಧೀಚಿಗೆ ಆ ಮಾತು ಹಿಡಿಸಲಿಲ್ಲ “ತ್ವಷ್ಟೃ. ನೀನು ಬ್ರಹ್ಮನಾಗಿರುವುದು ಲೋಕವನ್ನು ಸಂತಾನದಿಂದ ತುಂಬುವುದಕ್ಕೆ. ನಿನ್ನ ಕೆಲಸದಲ್ಲಿ ನೀನಿರು. ಈ ಕೃತ್ಯ ಮೊದಲಾದವುಗಳನ್ನು ಮಾಡಿ, ಇರುವ ಸ್ಥಿತಿಯನ್ನು ಕೆಡಿಸಬೇಡ. ಈ ದ್ವೇಷಭಾವವನ್ನು ಇಲ್ಲಿಗೇ ಬಿಡು. ಇಷ್ಟು ದಿವಸ ಈ ಭಾವದಲ್ಲಿದ್ದುದು ಸಾಕು” ಎಂದನು.

ಮಾತು ಮೃದುವಾಗಿ ಆಡುತ್ತಿದ್ದರೂ ಆ ನುಡಿಗಳಲ್ಲಿ ಏನೋ ವಜ್ರಸಾರವಿದ್ದಂತೆ ತ್ವಷ್ಟೃವಿಗೆ ಹಿಡಿದು, ಹೃದಯದಲ್ಲಿ ತುಂಬಿದ್ದ ಕರಾಳವಾದ ಇಂದ್ರದ್ವೇಷವೆಂಬ ಕತ್ತಲೆಯನ್ನು ತೊಳೆದು ಶುದ್ಧಮಾಡಿದಂತಾಯಿತು. ಇಂದ್ರನಿಗೆ ಸಹಾಯ ಮಾಡಕೂಡದು ಎಂದು ಕೇಳಿಕೊಳ್ಳಲು ಬಂದಿದ್ದವನು, ಈಗ ತದ್ವಿರುದ್ಧ ಭಾವವನ್ನು ಹಿಡಿದಂತಾಗಿ, “ನಿಜ, ದಧೀಚಿಯು ಹೇಳಿದುದು ಸರಿ. ಸ್ಥಿತಿರಕ್ಷೆಗಳಿಗೆ ನಿಯಮಿತನಾಗಿರುವವನು ತನ್ನ ಅಧಿಕಾರವನ್ನು ಉಪಯೋಗಿಸಿದರೆ ನಾನೇಕೆ ಅಡ್ಡವಾಗಬೇಕು?” ಎನ್ನಿಸಿತು. ತಾನು ಕೃತ್ಯವನ್ನು ಸೃಷ್ಟಿಸಿದುದು ಒಂದು ಅಪರಾಧವಾದರೆ ಅದು ತನ್ನ ಕಾರ್ಯವನ್ನು ಮಾಡಲೇಬೇಕೆಂದು ಹಟ ತೊಡುವುದು ಇನ್ನೂ ಮಹತ್ತರವಾದ ಅಪರಾಧವೆನಿಸಿ, ಕೃತ್ಯವು ಗೆದ್ದರೆ ಗೆಲ್ಲಲಿ, ಸೋತರೆ ಸೋಲಲಿ, ಅದರ ವಿಚಾರವಾಗಿ ಅಭಿಮಾನ ಪಡುವುದು ಹೆಡ್ಡತನ ಎನ್ನಿಸಿತು. ಎದ್ದು “ಬ್ರಹ್ಮಜ್ಞನ ದರ್ಶನದಿಂದ ನನಗೆ ಚಿತ್ತಶುದ್ಧಿಯಾಯಿತು. ಇನ್ನು ಮೇಲೆ ಇಂತಹ ದುಷ್ಕೃತ್ಯಗಳಿಗೆ ಮನಸ್ಸು ಹೋಗದಿರಲಿ” ಎಂದು ಪ್ರಾರ್ಥನೆ ಮಾಡಿ ಆತನಪ್ಪಣೆಯನ್ನು ಪಡೆದು ಕ್ರೋಧದುಃಖಗಳಿಂದ ಸಂತಪ್ತವಾಗಿ ಬಂದಿದ್ದವನು