ಎಂದನು. ಬೃಹಸ್ಪತಿಯು “ಸರಿ, ಸರಿ, ಈ ವೃತ್ರಸಖ್ಯವೂ ಆತನ ಅಪ್ಪಣೆಯಿಂದಲೇ ಆಗಿರುವುದು. ವಜ್ರವನ್ನು ಉಪಯೋಗಿಸಲು ಕಾಲವಿದೆ. ನಾನು ಹೇಳುವೆನು ಎಂದು ಆತನೇ ತಡೆದಿರುವನಲ್ಲ” ಎಂದನು. ಚತುರ್ಮುಖನು “ಹೋಗಿ ಬಾ” ಎನ್ನಲು ಇನ್ನೂ ಏನೇನೋ ಕೇಳಬೇಕು ಎಂದಿದ್ದವನು ಮರುಮಾತಾಡದೆ ಹೊರಟು ಬಂದುಬಿಟ್ಟನು. ಎಚ್ಚರವಾಯಿತು.
ಆಚಾರ್ಯನು ಎಚ್ಚರಗೊಂಡು ಪ್ರಹರಿಯನ್ನು ಕರೆದು “ಯಾರಾದರೂ ಬಂದಿರುವರೆ ?” ಎಂದು ವಿಚಾರಿಸಿದನು. ಪ್ರಹರಿಯು ದೇವರಾಜನೆನ್ನುವುದಕ್ಕೆ ಹೋಗಿದ್ದವನು ತಡೆದು, “ಶಚೀಪತಿಗಳು ದಯಮಾಡಿಸಿರುವರು” ಎಂದು ಬಿನ್ನವಿಸಿದನು. ಬೃಹಸ್ಪತಿಯು ನಗುತ್ತ ಮನಸ್ಸಿನಲ್ಲಿ “ಬ್ರಹ್ಮದೇವನು ಹೇಳಿರುವುದು ನಿಜವಾದರೆ ಮತ್ತೆ ದೇವರಾಜನಾಗಲು ಬಹಳ ಕಾಲವಿಲ್ಲ” ಎಂದುಕೊಂಡು ‘ಬರಹೇಳು’ ಎಂದನು.
ಆಚಾರ್ಯನೂ ಹಿಂದಿನ ಸುರೇಂದ್ರನೂ ಲೋಕಾಭಿರಾಮವಾಗಿ ಏನೇನೋ ಮಾತನಾಡುತ್ತಿದ್ದರು. ಆಚಾರ್ಯನು ಸಮಯವನ್ನು ಸಾಧಿಸಿ ಬ್ರಹ್ಮದೇವನು ಅಪ್ಪಣೆ ಕೊಡಿಸಿದುದನ್ನು ಆತನಿಗೆ ಹೇಳಿ, “ನೀನು ಶ್ರೀ ಮಹಾವಿಷ್ಣುವಿನ ಅರ್ಚನೆಯನ್ನು ಚೆನ್ನಾಗಿ ಮಾಡುತ್ತಿರು. ಎಲ್ಲವೂ ಒಳ್ಳೆಯದಾಗುವುದು” ಎಂದು ಆಶೀರ್ವದಿಸಿ ಕಳುಹಿಸಿದನು. ಏಕೋ ಏನೋ ಆಚಾರ್ಯನು ವೃತ್ರವಧವಾದ ಮೇಲೆ ಆಗುವ ಅನರ್ಥವನ್ನು ಅರಿತು ಮಾತ್ರ ಏನೂ ಹೇಳಲಿಲ್ಲ.
* * * *