ಪುಟ:Mahakhshatriya.pdf/೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಕರೆದು, ‘ನಾಳಿನಿಂದ ಇಂದ್ರನನ್ನು ನನ್ನ ಪಕ್ಕದಲ್ಲಿ ಸಿಂಹಾಸನದಲ್ಲಿ ಕುಳ್ಳಿರಿಸಿಕೊಳ್ಳುವೆನು. ಯಾವ ಯಾವ ಮಾನ ಮರ್ಯಾದೆಗಳು ನನಗೆ ಆಗುತ್ತಿವೆಯೋ ಅವೆಲ್ಲವೂ ಈತನಿಗೆ ಆಗಬೇಕು ಎಂದು, ನನ್ನ ಅಪ್ಪಣೆ ಎಲ್ಲರಿಗೂ ತಿಳಿದಿರಲಿ” ಎಂದನು.

ಆತನಿಗೆ ಆಗಿರುವ ಅತಿ ಸಂತೋಷಕ್ಕೆ ಕಾರಣವನ್ನು ಊಹಿಸಲಾರದೆ, ಇಂದ್ರನು ‘ಈತನೇಕೆ ಹೀಗೆ ಮಾತನಾಡುತ್ತಿರುವನು ?’ ಎಂದು ಸುರಾಚಾರ್ಯನ ಮುಖವನ್ನು ನೋಡಿದನು. ಆತನು ಅದೇನು ಸನ್ನೆ ಮಾಡಿದನೋ, ಇಂದ್ರನು ಎಚ್ಚರಗೊಂಡು, “ಅಪ್ಪಣೆ, ಸನ್ನಿಧಾನವು ಏನು ಬೇಕಾದರೂ ಮಾಡಬಹುದು” ಎಂದು ವಿನಯದಿಂದ ಕೈಮುಗಿದನು.

ವೃತ್ರೇಂದ್ರನಿಗೆ ಆ ವೇಳೆಗೆ ಇನ್ನೂ ಎರಡು ಸಲ ಪಾನವಾಯಿತು. ಅದರ ಮತ್ತು ತಲೆಗೇರಿತು. ಆ ಅಮಲಿನಿಂದ ತೊದಲು ಮಾತನಾಡುತ್ತ. “ಭಲೆ ಇಂದ್ರ, ಇದೆಂತಹ ವಿನಯ ! ಈ ವಿನಯಕ್ಕೂ ಒಲಿಯದಿದ್ದರೆ, ನನ್ನ ಪ್ರಭುತ್ವವೆಂತಹುದು? ನಾಳಿನಿಂದ ನೀನೇ ಇಂದ್ರ ! ನಾನು ನಿನ್ನನ್ನು ಸಿಂಹಾಸನದಲ್ಲಿ ಕುಳ್ಳಿರಿಸಿ ನೋಡುತ್ತ ಕುಳಿತುಕೊಳ್ಳುತ್ತೇನೆ. ನೀನೇನೋ ಚೆನ್ನಾಗಿ ರಾಜ್ಯವಾಳುತ್ತಿದ್ದೆಯಂತೆ ! ನಾಳಿನಿಂದ ನೀನು ಆಳು. ನಾನು ಅದನ್ನು ನೋಡಿಕೊಂಡಿರುತ್ತೇನೆ. ಇದುವರೆಗೆ ನಾನು ಇಂದ್ರನಾಗಿದ್ದೆ ! ನೀನು ಅನಿಂದ್ರನಾಗಿದ್ದೆ. ಅದಕ್ಕಾಗಿಯೇ ಅಲ್ಲ ನಾನು ಹುಟ್ಟಿದುದು? ನಾಳಿನಿಂದ ನೀನು ಇಂದ್ರ ! ನಾನು ಅತೀಂದ್ರ ! ಇಂದ್ರನ ಮೇಲೆ ಇರುವ ಇಂದ್ರ ನಾನು. ಏನು ಹೇಳುತ್ತೀಯೆ ಇಂದ್ರ ? ನಾಳಿನಿಂದ ನೀನು ಇಂದ್ರನಾಗಬೇಕು ತಿಳಿಯಿತೆ ? ಎಲ್ಲಿ ನಮ್ಮ ದಾನವಶಿಲ್ಪಿ ?” ಎಂದು ಮಯಾಸುರನನ್ನು ಕರೆದು “ಇಂದ್ರನ ಸಿಂಹಾಸನಕ್ಕಿಂತ ಒಂದು ಮೊಳ ಹೆಚ್ಚಿನ ಸಿಂಹಾಸನವನ್ನು ನಾಳೆ ಮಾಡಬೇಕು. ನಾಳಿನಿಂದ ನಾನು ಇಂದ್ರನ ಸಿಂಹಾಸನದಲ್ಲಿ ಕುಳಿತುಕೊಳ್ಳುವುದಿಲ್ಲ ತಿಳಿಯಿತೆ ?” ಎಂದು ಅಪ್ಪಣೆ ಮಾಡಿದನು. “ಇಂದ್ರ ! ನೀನು ಇಲ್ಲಿಯೇ ಇರು” ಎಂದು ಅಪ್ಪಣೆ ಮಾಡಿ ತಾನು ಅಮಲಿನಲ್ಲಿ ಹಾಗೆಯೇ ದಿಂಬಿನ ಮೇಲೆ ಒರಗಿದನು.

ಇಂದ್ರನಿಗೆ ಆಶ್ಚರ್ಯವಾಯಿತು. ವೃತ್ರನನ್ನು ಆತನು ಎಷ್ಟೋ ದಿನ ಅಮಲಿನಲ್ಲಿ ಕಂಡಿದ್ದನು. ಯಾವೊತ್ತೂ ಹೀಗೆ ಹೇಳಿರಲಿಲ್ಲ. ಇವೊತ್ತು “ನೀನೇ ಇಂದ್ರ ! ನಾಳಿನಿಂದ ನೀನೇ ಇಂದ್ರ” ಎನ್ನುತ್ತಿದ್ದಾನೆ. ಪ್ರಾರಬ್ಧವೇನಾದರೂ ಇದನ್ನು - ಇವನ ಬಾಯಲ್ಲಿ ನುಡಿದದ್ದನ್ನು ನಿಜ ಮಾಡಿಸುತ್ತದೆಯೋ ? ಏನಾದರೂ ಆಗಲಿ. ಇವನ ಬಾಯಲ್ಲಿ ಬಂದುದು ನಿಜವಾಗಲಿ. ಒಳಗೆ ಹೊರಗೆ ಎಲ್ಲಾ