ಪುಟ:Mrutyunjaya.pdf/೧೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಮೃತ್ಯುಂಜಯ

೪೭

ಏರಿ ಬಂದವರನ್ನು ಕೆಳಕ್ಕೆ ತಳ್ಳಿದರು. ಗದೆಯನ್ನು ಹೊತ್ತು ತಂದವರೊಡನೆ
ಏಟುಗಳ ವಿನಮಯವಾಯಿತು.
ಕೂಗು, ಆಕ್ರೋಶ, ಫೂತ್ಕಾರ, ಚೀತ್ಕಾರ....
ಅಂಗಳದಲ್ಲಿ ಉದ್ಯಾನ ಮೂಲೆಯಲ್ಲಿದ್ದ ಕಲ್ಲುಗಳನ್ನು ರಾಜಗೃಹದ ಸೇವಕರು ತಂದು ಕೊಟ್ಟರು, ಆಕ್ರಮಣಕಾರರ ಮೇಲೆ ಎಸೆಯಲು, ಉರುಳಿ ಬಿಡಲು.
ಆ ಜನರ ಮೇಲೆ ಸುರಿಯಲು ಮರಳುವ ನೀರು?
" ಮರಳುವ ನೀರು! ಮರಳುವ ನೀರು!"
___ಎಂದು ಸೆವಕನೊಬ್ಬ ಕೂಗಿದ.
ಇಬ್ಬರು ಮೂವರು ಒಲೆಗಳಿಗೆ ಉರಿಹಾಕಲು ಧಾವಿಸಿದರು.
ತಾಳೆಯ ದಿಮ್ಮಿ ಮಹಾದ್ವಾರದ ಬಲಪರೀಕ್ಷೆ ಮಾಡಿತು. ಮೊದಲು ಮೆಲ್ಲನೆ, ಎರಡನೆ ಸಲ ಬಲವಾಗಿ, ಮೂರನೆಯ ಸಲ ಇನ್ನಷ್ಟು ಬಲವಾಗಿ.
ಬಕಿಲ ಮೈ ಪರಚಿಕೊಂಡ; ಅಂಗೈಯಿಂದ ಮುಂತಲೆಯನ್ನು ಚಚ್ಚಿದ. ಬಾಗಿಲ ಮೇಲೆ ಧಾಳಿ ನಡೆಸಿದವರನ್ನು ಮೊದಲು ಇದಿರಿಸುವುದು ಅನಿವಾರ್ಯವಾಯಿತು. ಬಕಿಲ ಕೂಗಿ ನುಡಿದ:
"ಬಾಣ! ಬಾಣ!"
ನಿರ್ದೇಶ ಮುಗಿಯುವುದಕ್ಕೆ ಮುನ್ನ ಆತನೇ ಕಿರಿಚಿದ:
"ಆಯ್ಯೋ! ಆ ಮರ! ಅಲ್ಲಿ!"
ನೇರವಾಗಿ ಅವನ ಬಲಗಣ್ಣನ್ನೆ ಇರಿದಿತ್ತು, ಒಂದು ಬಾಣ.
ಬಕಿಲ "ಓ" ಎನ್ನುತ್ತ ಅಂಗಳಕ್ಕೆ ಧುಮುಕಿದ.
" ಆ ಮರ! ಅಲ್ಲಿ!" ಎಂದ ಮತ್ತೆ ಮತ್ತೆ.
ಮೂವರು ಕಾವಲು ಭಟರು ಬಾಣ ಹೂಡಿದರು.ಆದರೆ,ಮಹಾದ್ವಾರವನ್ನು ಮುರಿಯಲೆತ್ನಿಸುತ್ತಿದ್ದವರ ಮೇಲೆ ಪ್ರಯೋಗಿಸದೆ, ಕಾಣದ ಮರವನ್ನು ಕತ್ತಲಲ್ಲಿ, ನಿಂತಲ್ಲಿಂದಲೆ, ಅರಸಿದರು.
ಬಕಿಲನ ಅವಸ್ಥೆಯನ್ನು ಕಂಡ ಟಿಹುಟಿಗೆ ಬವಳಿ ಬಂದಂತಾಯಿತು.