ಪುಟ:Mrutyunjaya.pdf/೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೪

ಮೃತ್ಯುಂಜಯ

ಆರಂಭದಲ್ಲಿದ್ದುದು ಕತ್ತಲು. ಆ ಕತ್ತಲಲ್ಲಿ ಎಲ್ಲೆಲ್ಲೂ ನೀರು. ಅದರ
ಮೇಲೆ ತೇಲಿತೊಂದು ಭಾರೀ ಗಾತ್ರದ ಮೊಟ್ಟೆ....(ಮೊಟ್ಟೆಯೊ ? ಕಮಲದ
ಮೊಗ್ಗೊ ?) ಮೊಟ್ಟೆಯೊಡೆದು (ಮೊಗ್ಗು ಅರಳಿ) ಅದರೊಳಗಿಂದ ಉದಿಸಿ
ಬಂದ, ಉಜ್ವಲ ಪ್ರಭೆಯ ರಾ___ಸೂರ್ಯ___.... ರಶ್ಮಿಗಳ ಸ್ಪರ್ಶದಿಂದ
ಜಲರಾಶಿ ಹೊಂಬಣ್ಣ ತಳೆಯಿತು.
ರಾ ಆಕಾಶದಲ್ಲಿ ಪೂರ್ವದಿಂದ ಪಶ್ಚಿಮಕ್ಕೆ ಚಲಿಸಿದ. ಎಲ್ಲವೂ ಸ್ತಬ್ಧ
ಯಾವ ಸ್ವಾರಸ್ಯವೂ ಇರಲಿಲ್ಲ.
"ಶು"....ಎಂದ, ರಾ.
ಗಾಳಿ ಬೀಸಿತು. ನೀರಿನಲ್ಲಿ ಅಲೆಗಳೆದ್ದುವು. ಜಲಧಿ ಮೊರೆಯಿತು,
ಭೋರ್ಗರೆಯಿತು.
"ಟೆಫ್ ನುಟ್," ಎಂದು ನುಡಿದ.
ಮಳೆ ಸೋನೆಗಳು ಜಿನುಗಿದವು.
"ಗೆಬ್," ಎಂದು ಕರೆದ.
ಭೂಮಿ ನೀರಿನಿಂದ ಮೇಲಕ್ಕೆ ಎದ್ದಿತು.
"ನುಟ್," ಎಂದ.
ನುಟ್ ದೇವತೆ ಒಂದು ದಿಗಂತದ ಮೇಲೆ ಪಾದಗಳನ್ನು ಇರಿಸಿ, ಇನ್ನೊಂದು
ದಿಗಂತದ ಮೇಲೆ ಅಂಗೈಗಳನ್ನು ಊರಿ, ಆಕಾಶದಲ್ಲಿ ಕಮಾನಾದಳು.
"ಹಾಪಿ,"ಎಂದು ಉಚ್ಚರಿಸಿದ ರಾ.
ಭೂಮಿಯ ಮೇಲೆ ನೀಲ ನದಿ ಹರಿಯಿತು.
"ಗಂಡು ಹೆಣ್ಣು," ಎಂದ.
ನೆಲದ ಮೇಲೆ ಎಲ್ಲೆಲ್ಲೂ ಸ್ತ್ರೀಪುರುಷರು ಕಾಣಿಸಿಕೊಂಡರು.
ರಾ ಎಲ್ಲ ಕಡೆಗಳಿಗೂ ದೃಷ್ಟಿ ಬೀರಿದ. ಅವನ ಕಣ್ಣುಗಳಿಂದ ಪ್ರಾಣಿ
ಪಕ್ಷಿಗಳೂ ಬಗೆಬಗೆಯ ಸಸ್ಯಗಳೂ ಉದುರಿದುವು.
ಇದಾದ ಮೇಲೆ ರಾ ಸ್ವತಃ ಮಾನವನ ರೂಪು ತಳೆದು, ಭೂಮಿಗಿಳಿದು,
ಪೃಥ್ವೀವಲ್ಲಭನಾದ; ಹಿರಿಯ ಮನೆಯವನು____ಪೆರೋ____ಎನಿಸಿಕೊಂಡ.
ಲೋಕದ ಪ್ರಥಮ ಪೆರೋ ರಾ ಸಹಸ್ರಾರು ವರ್ಷ ಆಳಿದ. ಅದು
ಸುಖ ಸಮೃದ್ಧಿಯ ರಾಜ್ಯಭಾರ.
ಅವನಿಗೆ ವಯಸ್ಸಾಗುತ್ತ ಬಂದಂತೆ ದುಷ್ಟ ಶಕ್ತಿಯ ಫೂತ್ಕಾರ