ಪುಟ:Mrutyunjaya.pdf/೪೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೃತ್ಯುಂಜಯ ಅಮಾತ್ಯ ಹೆಖ್ವೆಟ್ ನತ್ತ ಹೊರಳಿ ಕೇಳಿದ: "ಸರು ಮಹಾಮಂಡಲಿಯ ಹಿರಿಯ ಸದಸ್ಯರ ಅಭಿಪ್ರಾಯವೇನೋ?" ಅಮಾತ್ಯನ ಭರ್ಚಿ ಒರೆ ಸೇರಿದ್ದು ಸ್ಪಷ್ಟವಾಗಿತ್ತು. ಹೆಖ್ವೆಟ್ ತನ್ನ ಹಿರಿತನದ ನೆಲೆಯಿಂದ ತಲೆ ಅಲುಗಿಸುತ್ತ, ಆನ್ ನಗರಿಯಲ್ಲಿ ತಾನು ಲಿಪಿಸುರುಳಿ ಬರೆಸಿದ್ದನ್ನು ಜ್ಞಾಪಿಸಿಕೊಳ್ಳುತ್ತ ನುಡಿದ: "ಮಹಾಪ್ರಭುವಿನ ಸನ್ನಿಧಿಯಲ್ಲಿ ನಾನು ಅರಿಕೆ ಮಾಡಿಕೊಳ್ಳೋದು ಇಷ್ಟು: ಪ್ರತಿಯೊಬ್ಬನೂ ತನ್ನ ತನ್ನ ಕರ್ತವ್ಯ ಮಾಡ್ತಾ ಇದ್ರೆ ಪ್ರಭುತ್ವದ ನಾವೆ ಎಲ್ಲಿಯೂ ಮಡುವಿನಲ್ಲಿ ತತ್ತರಿಸೋದಿಲ್ಲ; ನೀರಿನಡಿಯ ಮರಳುದಿಬ್ಬಕ್ಕೆ ಅದು ಬಡಿಯೋದಿಲ್ಲ, ಏಕತಾನದಲ್ಲಿ ಹುಟ್ಟು ಹಾಕಿದರೆ ನಾವೆ ನೇರ ದಾರಿಯಲ್ಲಿ ಚಲಿಸ್ತದೆ. ಅಂತಃಕಲಹದಿಂದ ಕಂದಾಯಕ್ಕೆ ಸಂಚಕಾರ, ಶಕ್ತಿಹ್ರಾಸ ನಿದ್ರಾನಾಶ..." ಅಷ್ಟು ಹೇಳಿ ಹೆಖ್ವೆಟ್ ಒಂದೊಂದಾಗಿ ಎಲ್ಲರ ಮುಖಗಳನ್ನೂ ಹೆಮ್ಮೆಯಿಂದ ನೋಡಿದ. ಈ ಅಂದಗೇಡಿಗೆ ಪಾಂಡಿತ್ಯದ ಬೆಡಗು ಬೇರೆ- ಎಂದುಕೊಂಡಳು ನೆಫರ್ ಟೀಮ್. ಅಮಾತ್ಯನಿಗೆ ಅಸೂಯೆ. ಪೆರೋ ನಸುನಕ್ಕ. ಮಹಾ ಅರ್ಚಕ ಮುಖದ ಸ್ನಾಯುಗಳನ್ನು ಸಡಿಲಿಸಿದ. ಆ ಮುಖಭಾವಗಳಿಂದ ಸಂತೃಪ್ತನಾಗಿ ಹೆಖ್ವೆಟ್ ಮುಂದುವರಿದ: "ನನ್ನ ಅಭಿಪ್ರಾಯವನ್ನು ಚುಟುಕಾಗಿ ಹೀಗೆ ಹೇಳಬಹುದು. ಮಾಟ್! ಮಾಟ್! ಪ್ರತಿಯೊಬ್ಬನ ನಡೆಯೂ ನುಡಿಯೂ ಮಾಟ್ ನಂತೆ. ಮಹಾಮಂದಿರದ ವಿಷಯದಲ್ಲಿಯೂ ಮಾಟ್, ಮಹಾಮನೆಯ ವಿಷಯದಲ್ಲಿಯೂ ಮಾಟ್.... ಸಹನೆ, ಸಮತೋಲನ, ಸಮನ್ವಯ, ಸುಖ, ಶಾಂತಿ...." ತಲೆದೂಗಿ ಪೆರೋ ಅಂದ: "ಇದನ್ನು ಬರೆದಿಡಬೇಕು." ಹೆಖ್ವೆಟ್ ಪೀಠದಿಂದೆದ್ದು ತಲೆಬಾಗಿ ವಂದಿಸಿ, "ಆಗಲೇ ಬರೆಸಿದ್ದೇನೆ" ಎಂದು ಹೇಳಿ, ಮತ್ತೆ ಆಸೀನನಾದ. ನೆಫರ್ ಟೀಮ್ ಎದ್ದು ಸುತ್ತಲೂ ದೃಷ್ಟಿ ಹಾಯಿಸಿ ಹೇಳಿದಳು. "ನಾನು ಇವತ್ತು ಪರಮಸುಖಿ. ರಾನನ್ನೂ ರಾ ವಂಶವನ್ನೂ ಕೆಲ ಸಮಯದಿಂದ ಕವಿದಿದ್ದ ಕೆಟ್ಟ ಮೋಡವನ್ನು ಧರ್ಮಗುರು ಚೆದರಿಸಿಬಿಟ್ಟಿದ್ದಾರೆ