ಪುಟ:Mrutyunjaya.pdf/೪೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೃತ್ಯುಂಜಯ ೪೨೫

   ಕೆಲವೇ ಕ್ಷಣಗಳಲ್ಲಿ ನಾವೆಯ ದೀಪಗಳು ಮಸಕು ಚಿಕ್ಕೆಗಳಾದುವು.ನದಿಯ ಹರಿವಿಗೆ ಇದಿರಾಗಿ, ದಕ್ಷಿಣಕ್ಕೆ, ನೀರನ್ನು ಸೀಳಿಕೊಂಡು ನಾವೆ ಸಾಗಿತು.
                      
                       ೧೦
   ಹಿರಿಯ ಸಲಹೆಗಾರ ಹೆಖ್ವೆಟ್ ಆನ್ ನಗರಿಗೆ ಹೊರಟ ದಿನ ರಾಜಧಾನಿಯನ್ನು ಬಿಟ್ಟು ಬಟಾವೇಗವಾಗಿ ಮಾರ್ಗಕ್ರಮಿಸಿದ. ಪವನ ಶಕ್ತಿಗೆ ತೋಳ್ಬಲವನ್ನೂ ಸೇರಿಸಿದರು ಅವನ ಅಂಬಿಗರು. ಬಟಾನೂ ಆಗಾಗ್ಗೆ ಹುಟ್ಟು ಹಾಕಿದ.  ಮೆಂಫಿಸ್ ದೂರವಾದಷ್ಟೂ ಹೆಚ್ಚಿತು ಮೆನೆಪ್ ಟಾನ ನೆನಪು.
  —‘ಇಷ್ಟು ಹೊತ್ತಿಗೆ ಚೌಕಮಣೆ ಆಟ ಆಡ್ತಿರಬೌದು.’
  —‘ಊಟದ ಸಮಯ.  ನಮ್ಮನ್ನು ನೆನಸ್ಕೋತಿರಬೌದು.’
  ನೀರಾನೆ ಪ್ರಾಂತ ಹತ್ತಿರವಾದಂತೆ ಸಂಗಾತಿಗಳೆಲ್ಲರ ಸ್ಮರಣೆ.  ತಾನು ಈ ಪ್ರಾಂತದ ಸಾರಿಗೆ ಮುಖ್ಯಸ್ಥ.  ಎರಡು ತಿಂಗಳಾಗುತ್ತ ಬಂತಲ್ಲ ಊರಿನ ದೋಣಿಕಟ್ಟೆಯನ್ನು ನೋಡದೆ.  ತಾನು ನೇಮಿಸಿದ್ದ ಕಿರಿಯ ಸಹಾಯಕ ಬಂದ—ಹೋದ ದೋಣಿಗಳ ಲೆಕ್ಕವನ್ನು ಇಟ್ಟಿರುವನೊ ಇಲ್ಲವೊ? ಮೆನೆಪ್ ಟಾಗೆ ಹೆಂಡತಿಯ—ಮಗನ ಯೋಚನೆಯೇ ಇಲ್ಲ ಎಂದು ತಾನು ಪರಿಹಾಸ್ಯ  ಮಾಡಿದ್ದ. ಆದರೆ ತನಗೊ?  ಕಳೆದ ಕೆಲ ವರ್ಷಗಳಲ್ಲಿ ಇಷ್ಟು ದೀರ್ಘ ಕಾಲ ತಾನೆಂದೂ ಊರು ಬಿಟ್ಟಿರಲಿಲ್ಲ.... ಖ್ನೆಮುದೇವ ಎರಡು ದಂಡೆಗಳಿಗೂ ಹಸಿರು ಬಳಿದಿದ್ದ. ಬಂಗಾರಹಳದಿಯಾಗಿ ಮಾರ್ಪಟ್ಟಿತ್ತು ಆ ಬಣ್ಣ. ತೆನೆ ಭಾರದಿಂದ ಬಾಗಿದ್ದ ಸಸಿಗಳು. ಗೋದಿ, ಯವೆ.  ಕುಯಿಲು ಹತ್ತಿರ ಬಂತು. ಒಂದೆರಡು ಪ್ಲಾಂತಗಳಲ್ಲಿ ಕುಯ್ಲು ನಡೆಸಿದ್ದರು ಕೂಡಾ. ತಮ್ಮಲ್ಲಿ ನಾಯಕನಿಗಾಗಿ, ತಮಗಾಗಿ ಕಾಯುತ್ತಿರಬೇಕು ಜನ. ಒಬ್ಬ ಹೇರು ದೋಣಿಯವನ ಮೂಲಕ ತಾನು ಕಳುಹಿಸಿದ್ದ ಸಂದೇಶ ತಲಪಿರಬಹುದು. ತಮ್ಮ ಬಂಧುಗಳ ಆತಂಕವನ್ನು ಸ್ವಲ್ಪಮಟ್ಟಿಗೆ ಕಡಿಮೆ ಮಾಡಿರಬಹುದು. ಆದರೂ ಖ್ನೆಮ್ ಹೊಟೆಪ್ ಕೂಗಾಡುವುದು ಖಂಡಿತ. ಸ್ನೊಫ್ರು ಕೂಡಾ ‘ಮೆನೆಪ್ ಟಾ ರಾಝಾಧಾನಿಯಲ್ಲಿ ಉಳಿದುದು ಸರಿಯಲ್ಲ’ ಎನ್ನಬಹುದು. ಅಂತೂ ಪೇಚಿನಲ್ಲಿ ಸಿಲುಕಿ ಕೊಂಡೆವು.