ಪುಟ:Mrutyunjaya.pdf/೪೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

 ಮೆನೆಪ್‍ಟಾ ಅಂದಿದ್ದ:

   "ಐದಾರು ದಿನ ಇದ್ದು ವಾಪಸಾಗು....”
   ಬಟಾ ನುಡಿದಿದ್ದ:
   "ನಾನು ಹೋಗ್ತಿರೋದು ನಮ್ಮವರನ್ನು ಕರಕೊಂಡು ಬರೋದಕ್ಕೆ. ನಾವಿಷ್ಟೇ ಜನ ಇದ್ದು ಏನಾದರೂ ಅಚಾತುರ್ಯ ಆದರೆ,ನಾಳೆ ನಮ್ಮ ಜನರಿಗೆ ಹ್ಯಾಗೆ ಮುಖ ತೋರಿಸಲಿ? ಏನೂಂತ ಹೇಳಲಿ?"
   ಔಟ, ಬೆಕ್ ನಂಬುಗೆಯ ಸಹಚರರು. ನಾಯಕನನ್ನು ಅವರು ನೋಡಿಕೊಳ್ತಾರೆ. ಆದರೂ ಬೇಗ, ಆದಷ್ಟು ಬೇಗ ತಾನು ಅವರ ಬಳಿಗೆ ಮರಳಬೇಕು, ಇತರ ಬಂಧುಗಳೊಡನೆ.
   ಮೇಲು ದಿಕ್ಕಿನಿಂದ ಬಂದ ಕೆಲ ನಾವೆಗಳ ಅಂಬಿಗರು “ಹೋಯ್‍!” ಎಂದರು, ದಾಟುತ್ತ. ಪರಿಚಯವಿದ್ದವರು "ಹೋಯ್‍! ಬಟಾ!" ಎಂದೂ ಕೂಗಿದರು.
   ನೀರಾನೆ ಪ್ರಾಂತದ ಗಡಿ ಕಾಣಿಸಿತು.
   ಅಂಬಿಗರೆಲ್ಲರಿಗೂ ಮಾತಾಡುವ ಆತುರ.
   _"ಪೈರು ಚೆನ್ನಾಗಿದೆ !"
   _“ಬೇರೆ ಪ್ರಾಂತಗಳ ಬೆಳೆಗಿಂತ ನಮ್ಮದೇ ಚೆನ್ನ!”
   _"ನೋಡಿ. ರೈತರು ಹೊಲಗಳ ಕಡೆ ಬರ್ತಿದ್ದಾರೆ. ಕುಯಿಲು ಯಾವತ್ತು ಅಂತ ನಿಷ್ಕರ್ಷೆ ಮಾಡ್ತಾರೇನೋ...."
   ಸ್ವಲ್ಪ ಹೊತ್ತು ಕಳೆದೊಡನೆ ಬಟಾ ಆಳವಾಗಿ ಉಸಿರೆಳೆದು, ಎದೆ ಹಿಗ್ಗಿಸಿಕೊಂಡು,ಚಲಿಸದೆ ನಿಂತ.
   "ಇದು ನಮ್ಮ ಜನರ ವಾಸನೆ! ಊರು ಬಂತು!” ಎಂದ.
   ಹೀಗೆ,ಮೆಂಫಿಸಿನಲ್ಲಿ ಕೆಫ್ಟು ಸರಕು ಇಳಿಸುತ್ತಿದ್ದಾಗ; ಬಟಾ ನೀರಾನೆ ಪ್ರಾಂತದ ಮುಖ್ಯಪಟ್ಟಣದ ದೋಣಿಕಟ್ಟೆಯನ್ನು ಮುಟ್ಟಿದ.
   ಬಟಾ ನೇಮಿಸಿದ್ದ ಕಿರಿಯ ಸಹಾಯಕ ಕಟ್ಟೆಯಲ್ಲಿದ್ದ. ಮರದ ಬುಡದಲ್ಲಿ ಅವನ ಕಾರ್ಯಾಲಯ. ಒಂದು ಲಿಪಿಸುರುಳಿ ಮತ್ತು ಮಸಿಪಾತ್ರೆ. ಪೀಠಗಳಿರಲಿಲ್ಲ.