ಪುಟ:Mrutyunjaya.pdf/೫೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.



  ೫೩೦                       ಮೃತ್ಯುಂಜಯ
ನದಿಗೆ ಉರಿ ಹಚ್ತಾನೆ' ಎಂದುಕೊಂಡು ಅಮಾತ್ಯ. (ಪೆರೋಗೆ ನಿದ್ದೆ. ಮಹಾ ರಾಣಿ ಯೋಚಿಸಿದಳು: 'ಸದ್ದಿಲ್ಲದ ನಿದ್ದೆಯೇ ಆದರೆ ಎಬ್ಬಿಸೋದು ಬೇಡ.' ಪಕ್ಕಕ್ಕೆ ಹೊರಳಿ ಅವಳೆಂದಳು:'ನೆಹನ, ಒಂದು ದಿವಸ ಈ ಟೆಹುಟಿ  ಅಮಾತ್ಯನಾಗ್ತಾನೆ ಅಲ್ಲವಾ ?' ಉತ್ತರ ನಿರೀಕ್ಷಿಸದೆ ಅವಳೇ ಮುಂದುವರಿ ದಳು: 'ಇನ್ನು ನಿನ್ನ ಸೊಗಸುಗಾರ ಗಂಡ ಮಾತಾಡ್ತಾನೊ ?')
 ಮೆನೆಪ್ಟಾಗೆ ಗಟ್ಟಿಯಾಗಿ ನಗಬೇಕೆನಿಸಿತು. ಇದಲ್ಲವೆ ವಿಚಾರಣೆ? ಜನ ಹೊರಹೋಗುತ್ತಿದ್ದಾರೆ; ಹೊಸಬರು ಬರುತ್ತಿದ್ದಾರೆ. ಮೂಲೆಯಲ್ಲಿ ಸ್ಥೂಲಕಾಯನೊಬ್ಬನ ಮರೆಯಿಂದ ಎರಡು ಕಣ್ಣುಗಳು ತನ್ನೆಡೆಗೆ ನೋಡುತ್ತಿವೆ. ಮೆನ್ನ...
 ನ್ಯಾಯಮೂರ್ತಿಯ ದೃಷ್ಟಿ ತನ್ನೆಡೆಗೆ ಹರಿಯಿತೆಂದು ಗೇಬು ಗಡಬಡಿಸಿ ಎದ್ದ. ಬಡಬಡನೆ ಆತನೆಂದ :
 “ಪೆರೋನ ಆಯುರಾರೋಗ್ಯ ವರ್ಧಿಸಲಿ! ಸಂಪೂರ್ಣ ಸತ್ಯ, ಟೆಹುಟಿ ಹೇಳಿದ್ದು. ಆ ದಿವಸ ಅನಾಗರಿಕ ಮೃಗ ಬಲದ ಮುಂದೆ ದೇಶದ ಹಿರಿಯ ಕಂದಾಯ ಅಧಿಕಾರಿ ಟೆಹುಟಿಯೂ ಪ್ರಾಂತಪಾಲನಾದ ನಾನೂ ಹಿಮ್ಮೆಟ್ಟ ಬೇಕಾಯ್ತು. ನಮ್ಮ ಸಜೀವ ದಹನ ಈ ದಂಗಕೋರರ ಉದ್ದೇಶವಾಗಿತ್ತು.
ನನ್ನ ಪತ್ನಿ ನೆಹನವೇಯ್ಟ್ ಅವತ್ತು ಅಲ್ಲಿರಲಿಲ್ಲ. ಪತ್ನಿಯ ಮತ್ತು ಮಕ್ಕಳ ಆಭರಣಗಳನ್ನು ಲೂಟಿ ಮಾಡಿದ್ರು, ಅವರೂ ಇದ್ದಿದ್ದರೆ ಇಡೀ ಗೇಬು ಕುಟುಂಬವೇ ನಿರ್ನಾಮವಾಗ್ತಿತ್ತು....ಮಾಡಿದ ತಪ್ಪನ್ನು ಮಕ್ಕಳು ತಿದ್ದಿ ಕೊಳ್ಳಲೀಂತ ದಯಾಮಯ ಪೆರೋ ಕಾಲಾವಕಾಶ ಕೊಟ್ರು. ಏನೂ ಪ್ರಯೋಜನವಾಗಲಿಲ್ಲ. ಪೆರೋಗೆ ಕಾಣಿಕೆ ಅರ್ಪಿಸೋ ನೆಪದಲ್ಲಿ ಈ ಧೂರ್ತ ನಾಯಕ ಮೆಂಫಿಸಿಗೂ ಬಂದ. ಅರಮನೆಗೆ ಪ್ರವೇಶ ದೊರಕಿಸಿಕೊಂಡ. ಸರುಸದಸ್ಯರಿಗೆ ಮಹಾಪ್ರಭು ನೀಡಿದ ಔತಣಕ್ಕೆ ತಾನೂ ನುಸುಳಿಬಂದ. ಅರಮನೆಯ ಪರಿಚಾರಕರನ್ನು ದೇವರೂಪನ ವಿರುದ್ಧ ಎತ್ತಿಕಟ್ಟೋದಕ್ಕೆ ಯತ್ನಿಸಿದ. ಸುರೆ ಕುಡಿದ ಮಂಗನಂತೆ ಕುಣಿದ. ಇಂಥ ವ್ಯಕ್ತಿಗೆ ಎಂಥ ಕಠಿನ ಶಿಕ್ಷೆ ವಿಧಿಸಿದರೂ ಸಾಲದು.”
 ಇಷ್ಟನ್ನು ಹೇಳಿ, ಮಹತ್ಕಾರ್ಯ ಸಾಧಿಸಿದವನಂತೆ, ಗೇಬು ಅತ್ತಿತ್ತ ನೋಡುತ್ತ ಕುಳಿತ.