ಪುಟ:Mrutyunjaya.pdf/೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



೫೮

ಮೃತ್ಯುಂಜಯ

"ನೆಫಿಸ್...."
___ಮೆನೆಪ್ಟಾ ಕರೆದ.
ಜಿನುಗಿದ ಕಂಬನಿಯನ್ನು ನಡುಬೆರಳಿಂದ ಒರೆಸಿ ನೆಫಿಸ್ ಅಂದಳು :
"ಚಿಕ್ಕಪ್ಪನ ನೆನಪಾಯ್ತು."
ಮಡದಿ ಹುಡುಗಿಯಾಗಿದ್ದಾಗ ನಡೆದದ್ದು. ಅವನ ಪ್ರಜ್ಞೆಯಲ್ಲಿ
ಬೆರೆತಿತ್ತು ಕೇಳಿ ತಿಳಿದಿದ್ದ ಆ ದಾರುಣ ಕಥೆ.
ಸ್ವಲ್ಪ ಸಮಯದ ಹಿಂದೆ ರಾಮೆರಿಪ್ಟಾನೂ ತಾಯಿಯ ಬಾಯಿ
ಯಿಂದ ಅದನ್ನು ಕೇಳಿದ್ದ.

****

ಆಗ ನೆಫಿಸ್ ಏಳುವರ್ಷದ ಹುಡುಗಿ. ಕರುಳು ಬೇನೆಗೆ ತುತ್ತಾಗಿ
ತಾಯಿ ತೀರಿಕೊಂಡಳು. ಚಿಕ್ಕಮ್ಮ ಬಂದು, " ನಾಲ್ಕು ದಿನ ನಮ್ಮಲ್ಲಿರಲಿ "
ಎಂದು ಹೇಳಿ, ನೆಫಿಸ್ ಳನ್ನು ಕರೆದುಕೊಂಡು ಹೋದಳು.
ಆ ಚಿಕ್ಕಮ್ಮನಿಗೆ ಒಂದೊಂದು ವರ್ಷ ಅಂತರದ ನಾಲ್ವರು ಮಕ್ಕಳು.
ಎರಡು ಗಂಡು, ಎರಡು ಹೆಣ್ಣು. ಅವರೆಲ್ಲ ನೆಫಿಸ್ಗಿಂತ ಚಿಕ್ಕವರು.
ಅವರೊಡನೆ ಆಟ ಆಡುತ್ತ ತನ್ನ ತಾಯಿಯ ಸಾವಿನ ಶೋಕವನ್ನು ನೆಫಿಸ್
ಮರೆತಳು.
ಒಂದು ವಾರ ಆಗಿತ್ತಷ್ಟೆ. ಕಂದಾಯ ವಸೂಲಿಯ ಆರು ಜನ ಕರಿಯ
ಭಟರು ಅಲ್ಲಿಗೆ ಬಂದರು. ಮುಖ್ಯ ಪಟ್ಟಣದಲ್ಲಿ ತಮ್ಮ ಕೆಲಸ ಮುಗಿಸಿ
ಹಳ್ಳಿಗಳ ಕಡೆ ಅವರು ವಸೂಲಿಗೆ ಹೊರಟಿದ್ದರು. ಅಧಿಕಾರಿ ಇರಲಿಲ್ಲ. ಭಟರು
ಮಾತ್ರ.
ತನ್ನ ಗುಡಿಸಲಿಗೆ ಅವರು ಬಂದಾಗ ನೆಫಿಸಳ ಚಿಕ್ಕಪ್ಪ ದೈನ್ಯದಿಂದ
ಪ್ರಾರ್ಥಿಸಿದ:
"ಪೆರೋನ ಆಯುರಾರೋಗ್ಯ ಹೆಚ್ಚಲಿ ! ಈ ವರ್ಷ ನನ್ನಲ್ಲೇನೂ
ఇల్ల...."
ಒಬ್ಬ ಭಟ ಅಣಕಿಸಿದ.
"ನನ್ನಲ್ಲೇನೂ ಇಲ್ಲ! ಕಳ್ಳ ನನ್ಮಕ್ಳು. ಈ ಪಲ್ಲವಿ ನಿಮಗೆ ರೂಢಿ
ಯಾಗಿದೆ."