ಪುಟ:Mrutyunjaya.pdf/೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಮೃತ್ಯುಂಜಯ

೫೯

ಇನ್ನೊಬ್ಬ ಭಟ ನೀರಾನೆ ತೊಗಲಿನ ಚಾವಟಿಯಿಂದ ಚಿಕ್ಕಪ್ಪನಿಗೆ
ಚುರುಕು ಮುಟ್ಟಿಸಿದ. ಚಿಮ್ಮುವ ರಕ್ತದ ವೃತ್ತ ಬೆನ್ನನ್ನೂ ಎದೆಯನ್ನೂ
ಬಳಸಿತು. ಒಬ್ಬನ ಕೈಯಲ್ಲಿ ಹಗ್ಗವಿತ್ತು. ಉಳಿದವರ ಕೈಗಳಲ್ಲಿ ಸೋಗೆ
ಕಿತ್ತ ತಾಳೆಯ ಕೊರಡುಗಳು.
"ಆಣೆ ಮಾಡಿ ಹೇಳ್ತೇನೆ....ಇನ್ನೊಂದು ವಾರಕ್ಕೆ ಸಾಲುವಷ್ಟು
ಕಾಳೂ ನನ್ನಲ್ಲಿಲ್ಲ."
"ಕುಯ್ಲು ಮುಗಿದು ಒಂದು ತಿಂಗಳೂ ಆಗಿಲ್ಲ. ಎಲ್ಲಿ ಬಚ್ಚಿಟ್ಟೆ?"
"ಹೊಲದಲ್ಲೇ ಫಸಲಿಗೆ ಹುಳ ಹಿಡೀತು. ಅರ್ಧ ಕೆಟ್ಟುಹೋಯ್ತು.
ಕಾಡು ಹಂದಿಗಳ ಪಾಲಾಯ್ತು ಒಂದಷ್ಟು. ಉಳಿದದ್ದರಲ್ಲಿ ಇಲಿಗಳೂ ಮಿಡತೆ
ಗಳೂ ಸ್ವಲ್ಪ ಮುಕ್ಕಿದ್ವು."
"ಹಕ್ಕಿಗಳು ಬರ್ಲಿಲ್ವ?"
"ಬಂದ್ವು ನಮ್ಮಪ್ಪ....ಚೂರು ಪಾರು ಮನೆಗೆ ಬರೋದಕ್ಮುಂಚೆ
ಕಳ್ಳರೂ ಕೈಹಾಕಿದ್ರು."
ಚಾವಟಿ ಮತ್ತೆ ಸುಂಯ್ ಗುಟ್ಟಿತು. ಗುಡಿಸಲಿನ ಮುಂದಿತ್ತು ನೀರು
ಹರಿಯುತ್ತಿದ್ದ ಕಿರಿಯ ನಾಲೆ. ನೆಫಿಸಳ ಚಿಕ್ಕಪ್ಪನನ್ನು ದರದರನೆ ಎಳೆದು
ಬೋರಲು ಕೆಡವಿದರು. ಮುಖವನ್ನು ನಾಲೆಯಲ್ಲಿ ಅದ್ದಿದರು.
ಇಬ್ಬರು ಗುಡಿಸಲಿನ ಒಳಗಿದ್ದುದನ್ನೆಲ್ಲ ಜಾಲಾಡಿದರು. ಹೆದರಿ ಮೂಲೆ
ಸೇರಿ ಅಳುತ್ತ ನಿಂತಿದ್ದ ನೆಫಿಸಳನ್ನೂ ಚಿಕ್ಕ ಮಕ್ಕಳನ್ನೂ ಗದರಿಸಿದರು.
ಅಂಗೈಯಿಂದ ಏಟುಕೊಟ್ಟರು, ಮುಷ್ಟಿಗಳಿಂದ ಗುದ್ದಿದರು.
"ಎಲ್ಲಿ ನಿಮ್ಮಮ್ಮ?"
"ಸತ್ಹೋದ್ಲು," ಎಂದಳು ನೆಫಿಸ್.
ಅಷ್ಟರಲ್ಲೆ ಓಡಿ ಬಂದಳು, ಭೂಮಾಲಿಕರ ಮನೆಗೆ ದುಡಿಯಲು
ಹೋಗಿದ್ದ ಚಿಕ್ಕಮ್ಮ. ಆಕೆ ಧ್ವನಿ ತೆಗೆದು ಅತ್ತಳು.
'ಸತ್ಹೋದ್ಲು' ಎಂದಿದ್ದಳಲ್ಲ ಹುಡುಗಿ? ಆ ಭಟನಿಗೆ ಅವಳ ಮೇಲೆ
ರೋಷ.
"ನಿಮ್ಮಮ್ಮ ಸತ್ಹೋದ್ಲು ಅಂತ ಸುಳ್ಳು ಹೇಳಿದಿಯಾ?"
ಆತ ಹುಡುಗಿಯ ತುರುಬಿಗೆ ಕೈ ಹಾಕಿ ಎಳೆದ.