ಪುಟ:Rangammana Vathara.pdf/೧೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

110

ಸೇತುವೆ

"ಚಂಪಾ.."
ಮತ್ತಷ್ಟು ಮೃದುವಾದ, ಸ್ವಲ್ಪ ದೀರ್ಘವಾದ ಎರಡನೆಯ ಕರೆ.
ಮೊದಲ ಸಲ ಕರೆದಾಗಲೇ ಬಂದು ಬಾಗಿಲ ಹಿಂದೆಯೇ ನಿಂತಿದ್ದ ಚಂಪಾವತಿ
ಚಿಲಕ ತೆಗೆದು ಬಾಗಿಲು ತೆರೆದಳು. ಮೀನು ನೀರೊಳಕ್ಕೆ ನುಸುಳಿದ ಹಾಗೆ ಸದ್ದಿಲ್ಲದೆ,
ಆತ ಮನೆಯೊಳಕ್ಕೆ ಬಂದ. ನಿರೀಕ್ಷೆಯ ಮುಗುಳುನಗೆ ಆಕೆಯ ತುಟಿಗಳ ಮೇಲೆ
ಮೂಡಿ ಅರಳುತ್ತಿತ್ತು. ಆತ ಕಣ್ಣೆವೆ ಮುಚ್ಚಿ ತೆರೆಯುವದರೊಳಗೆ ಕದವನ್ನು
ಹಿಂದಕ್ಕೆ ತಳ್ಳಿ ಅಗಣಿ ಹಾಕಿದ;ಕೈಯಲ್ಲಿದ್ದ ಪೊಟ್ಟಣವನ್ನು ನೆಲದ ಮೇಲಿರಿಸಿದ; ಓಡಿ
ಹೋಗುವವಳಂತೆ ನಟಿಸುತ್ತಿದ್ದ ಚಂಪಾವತಿಯನ್ನು ಎರಡೂ ಬಾಹುಗಳಿಂದ ಸುತ್ತು
ವರಿದ. ಆತನ ದೃಷ್ಟಿ ಅರಳುತ್ತಲಿದ್ದ ಆ ತುಟಿಗಳ ಸೊಬಗಿನ ಮೇಲೆಯೇ ನೆಟ್ಟಿತು.
ಆಕೆಯ ಅರೆಮುಚ್ಚಿದ ಕಣ‍್ಣುಗಳು ಯಾವುದೋ ಸುಖಕ್ಕಾಗಿ ತುಟಿಗಳೊಡನೆ ಸ್ಪರ್ಧಿ
ಸಿದುವು. ಆತ ಬೆಳಕಿನೆದುರಲ್ಲಿ ಏನೂ ಕಾಣಿಸಬಾರದೆಂದು ಕಣ‍್ಣು ಮುಚ್ಚಿಯೇ ಕೊಟ್ಟ.
ಒಂದು, ಎರಡು, ಮೂರು...ನಾಲ್ಕು....
ಕಂಠದಿಂದ ಕುಲು ಕುಲು ಧ್ವನಿ ಹೊರಡಿಸುತ್ತ ಆಕೆಯೆಂದಳು:
"ಸುಸ್ತು, ಹೆಚ್ಚಾಯ್ತು ಇವತ್ತು!"
ಇಬ್ಬರೂ ತಮ್ಮನ್ನೇ ನೋಡುತ್ತಿದ್ದ ಮಗುವನ್ನು ಕಂಡರು, ಅಪ್ಪ ಅಮ್ಮ
ಅದೇನೋ ಮಾಡುತ್ತಿದ್ದುದನ್ನು ಆ ಮಗು ನೋಡಿ ನಕ್ಕಿತು.
ಹುಸಿಮುನಿಸಿನ ಧ್ವನಿಯಲ್ಲಿ ಚಂಪಾ ಅಂದಳು:
"ನೋಡಿ...ಮಗು...ನಾಚಿಕೇನೂ ಇಲ್ಲ ನಿಮಗೆ."
"ಹೋಗಲಿ ಬಿಡು. ತನ್ನ ತಾಯಿ ಎಂಥವಳೂಂತ ಈಗಿನಿಂದ್ಲೇ ಗೊತ್ತಾಗಲಿ
ಅದಕ್ಕೆ!"
"ಊಂ...ಆಗ್ಲೇ ಬಂದಿದ್ರಂತೆ. ಎಲ್ಲಿಗೆ ಹೋಗಿದ್ರಿ?"
"ಜನಾನಾ ಕಚೇರಿ ನಡೀತಾ ಇತ್ತು ಇಲ್ಲಿ. ಹೊರಟ್ಹೋ
"ಸಾಕು ತಮಾಷೆ."
"ಭರ್ಜರಿಯಾಗಿತ್ತೊ?"
"ಹೂಂ ಎಲ್ಲರಿಗೂ ಖುಶಿಯಾಯ್ತು."
"ಸರಿ ಇನ್ನು. ಹಾಡು ಹೇಳಿಯೇ ನೀರು ಬರಿಸು, ದೀಪ ತರಿಸು_ಅಂತಾರೆ
ನೋಡು!"
"ರಂಗಮ್ನೋರು ಬಂದಿದ್ರು."
"ಓ! ಅವರೆದುರು ಓ ಮೋರೆ ರಾಜಾಂತ ಹಾಡಿದ್ಯೇನು?"
"ಉಂಟೆ ಎಲ್ಲಾದರೂ? ಕಾಲಹರಣ ಮೇಲರಾ ಹರೇ ಹಾಡ್ಪೆ."
"ಭೇಷ್."