ಪುಟ:Rangammana Vathara.pdf/೧೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ರಂಗಮ್ಮನ ವಠಾರ

109

ದೋರೆಲ್ಲ ಜಮೆಯಾಗ್ಬಿ‌‌‍‍‍‍‌‌‌‍ಟ್ಟಿದ್ರು."
"ಕೆಳಗೇನೋ ಗಲಾಟೆಯಾಗ್ತಿತ್ತಲ್ಲೋ. ಮೆಲಕ್ಬನ್ನೀಂತ ನಿಮ್ಮಿಬ್ರನ್ನೂ ಕೂಗ್ದೆ
-ನಿಮಗೆ ಕೇಳಿಸ್ಲೇ ಇಲ್ಲ."
ತಾಯಿ ಮಾತು ಮುಗಿಸುತ್ತಲೆ ಜಯರಾಮುವೆಂದ:
"ಕೊನೇ ಮನೆಯೋರು ಹಾಡ್ತಿದ್ರು. ಅದನ್ನ ಕೇಳೋಕೆ ಹೋದ್ರೊಂತ
ತನ್ನ ಹೆಂಡತಿಗೆ ಪೋಲೀಸ್ ಸಾಹೇಬರು ಚೆನ್ನಾಗಿ ಶಿಕ್ಷೆ ಕೊಟ್ರು."
"ಅವನೊಬ್ಬ__"
ಏನೋ ಹೇಳಬೇಕೆಂದಿದ್ದರು ತಾಯಿ. ಆದರೆ ಮಾತು ಅಲ್ಲಿಗೆ ನಿಂತಿತು.......
ಕೆಳಗೆ ರಂಗಮ್ಮ ತಮ್ಮನ್ನು ಹಾದು ಮುಂದೆ ಹೋಗುತ್ತಿದ್ದ ಶಂಕರನಾರಾಯ
ಣಯ್ಯನನ್ನು ಕಂಡರು.
"ಈಗ ಬಂದಿರೇನಪ್ಪ?"
"ಹೂಂ ರಂಗಮ್ನೋರೆ."
ಮಾತು ಬೆಳೆಸಲು ಇಷ್ಟವಿಲ್ಲದೆ ಶಂಕರನಾರಾಯಣಯ್ಯ ಅಷ್ಟು ಹೇಳಿ ನೇರವಾಗಿ
ತನ್ನ ಬಾಗಿಲಿನತ್ತ ನಡೆದ. ಆದರೆ ರಂಗಸ್ವಾಮಿಯ ಹೆಂಡತಿ ಹಣೆಯ ಮೇಲೆ
ಕೈಯಿಟ್ಟು ಅಳುತ್ತಿದ್ದ ದೃಶ್ಯ ತೆರೆದ ಬಾಗಿಲಿನ ಎಡೆಯಿಂದ ಅತನಿಗೆ ಕಾಣಿಸದಿರಲಿಲ್ಲ.
ರಂಗಮ್ಮ ಅಳುತ್ತಿದ್ದಾಕೆಯನ್ನು ಸಂತೈಸಲು ಯತ್ನಿಸಿದರು.
"ಏಳಮ್ಮ ನೀನು. ಮಕ್ಕಳಿಗೆ ಬಡಿಸು.ನೀನೂ ಊಟ ಮಾಡಿ ನಿದ್ದೆ ಹೋಗು.
ಆತನೇನೊ ಇನ್ನು ಬರೋದಿಲ್ಲ. ಹೂಂ. ಏಳು ಏಳು!"
ಇಷ್ಟು ಹೇಳಿ ಅವರು ಅಸ್ಪಷ್ಟವಾಗಿ ಏನನ್ನೋ ಹೇಳುತ್ತ ತಮ್ಮ ಗೂಡನ್ನು
ಸೇರಿದರು.
.....ಒಳಗಿನಿಂದ ಆಗಣಿ ಹಾಕಿತ್ತು.
"ಬಾಗಿಲು!" ಎಂದು ಒರಟು ಒರಟಾಗಿ ಎಂದೂ ಕೂಗಿದವನಲ್ಲ ಶಂಕರ
ನಾರಾಯಣಯ್ಯ. ಬಾಗಿಲು ಮುಚ್ಚಿದಾಗ ಹೊರಗೆ ನಿಂತು, ಪ್ರೀತಿಯೇ ಮಾತಾಯಿ
ತೇನೋ ಎಂಬಂತೆ ಕರೆಯುತ್ತಿದ್ದ:
"ಚಂಪಾ!"
ಆ ಸ್ವರ ಕೇಳಿಸಿದ ಮನೆ ಹೆಂಗಸರಿಗೆಲ್ಲಾ ಕಸಿವಿಸಿಯಾಗುತ್ತಿತ್ತು. ಚಂಪಾವತಿ
ಭಾಗ್ಯವಂತೆ ಎಂದುಕೊಳ್ಳುತ್ತಿದ್ದರು:
ಆ ಭಾಗ್ಯವಂತೆಯೊ ಗಂಡ ತನ್ನ ಹೆಸರು ಹಿಡಿದು ಕರೆಯುವಂತೆ ಮಾಡ
ಬೇಕೆಂದೇ, ಕತ್ತಲಾಗುತ್ತಲೇ ಬಾಗಿಲು ಹಾಕುತ್ತಿದ್ದಳು. ಅಷ್ಟೇ ಅಲ್ಲ ಎರಡನೇ ಬಾರಿ
ಆತ ಕರೆಯಲೆಂದೇ,ಮೊದಲ ಸಲಕ್ಕೇ ಬಾಗಿಲು ತೆರೆಯುತ್ತಿರಲಿಲ್ಲ.
ಹೆಂಡತಿಯ ಈ ಹಂಚಿಕೆಯೊಂದೂ ತಿಳಿಯದ ಮುಗ್ಧನಾಗಿರಲಿಲ್ಲ ಶಂಕರ
ನಾರಾಯಣಯ್ಯ. ಆತನಿಗೂ ಈ ಬಗೆ ಇಷ್ಟವೇ.