ಪುಟ:Rangammana Vathara.pdf/೧೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ರಂಗಮ್ಮನ ವಠಾರ

137

"ಇಲ್ಲ. ಅಲ್ಲಿ ಬಟ್ಟೆ ಮೇಲೆ ಬರೆಯೋದು."
ಹಲಿಗೆ ಸಿಗದೆ ಬೋರ್ಡಿನ ಯೋಚನೆಯನ್ನು ಆತ ಬಿಟ್ಟುಕೊಡಬಹುದು ಎಂದು
ಭಾವಿಸಿದ್ದ ಶಂಕರನಾರಾಯಣಯ್ಯ. ಅದು ಸುಳ್ಳಾಯಿತು. ಊರೆಲ್ಲ ಸುತ್ತಾಡಿ
ಪದ್ಮನಾಭಯ್ಯ ಮೂರು ಕಾಸು ಕೊಡದೆಯೇ ಒಂದು ಹಲಿಗೆ ದೊರಕಿಸಿಕೊಂಡು
ಬಂದ.
ಶಂಕರನಾರಾಯಣಯ್ಯನೆಂದ:
"ಬೋರ್ಡು ಅದೇನೂಂತ ಬರೀಬೇಕೋ ಅದನ್ನ ಕಾಗದದ ಮೇಲೆ ಬರಕೊಡಿ."
ಆತ ಬರೆದುಕೊಟ್ಟ.
'ಪಾಮಿಸ್ಟ್ರಿ ಪ್ರೊಫೆಸರ್ ಪದ್ಮನಾಭಯ್ಯ.'
ಶಂಕರನಾರಾಯಣಯ್ಯ ಪ್ರಯಾಸಪಟ್ಟು ನಗು ತಡೆದುಕೊಂಡು ಹೇಳಿದ:
"ಇದೇ ಸರಿಯಾಗಿದೆ ಅಂತೀರಾ?"
"ಹೂಂ. ಹೂಂ. ಹಾಗೇ ಇರಬೇಕು."
ಎರಡು ದಿನಗಳಲ್ಲಿ ಬೋರ್ಡು ಸಿದ್ಧವಾಯಿತು. ಬರೆದುದಕ್ಕೆ ಪ್ರತಿಫಲದ
ಮಾತನ್ನು ಯಾರೂ ಆಡಲಿಲ್ಲ. ರಂಗಮ್ಮನಿಗೆ, ಪದ್ಮನಾಭಯ್ಯ ಬೋರ್ಡು ತೂಗ
ಹಾಕುವ ಯೋಚನೆ ಹಿಡಿಸಲಿಲ್ಲ. ಅಲ್ಲದೆ ಪದ್ಮನಾಭಯ್ಯನ ಮನಸ್ಸಿನೊಳಗೇ ಇದ್ದ
ಅಂಜಿಕೆಯೂ ನಿಜವಾಯಿತು. ವಠಾರದ ಹೊರಗಿನ ಗೋಡೆಗಳಲ್ಲೆಲ್ಲೂ ಬೋರ್ಡುನ್ನು
ತೂಗಹಾಕುವಂತಿರಲಿಲ್ಲ.
"ಜಗಳಕ್ಕೆ ಕಾರಣ. ಅದೆಲ್ಲಾ ಬೇಡೀಪ್ಪಾ," ಎಂದು ಖಡಾಖಂಡಿತವಾಗಿ
ರಂಗಮ್ಮ ಹೇಳಿದರು.
ಆದರೂ ಎದೆಗುಂದದೆ ಪದ್ಮನಾಭಯ್ಯ, ಬೀದಿಗೆ ಕಾಣಿಸುವಂತೆ ಹಿತ್ತಿಲ
ಗೋಡೆಯ ಮೂಲೆಯಲ್ಲಿ ಬೋರ್ಡನ್ನು ಒರಗಿಸಿದ.
ಚಂಪಾ ಕೇಳಿದಳು:
"ಬೋರ್ಡು ಬರೆದದ್ದಕ್ಕೆ ಏನಾದರೂ ಬಂತೇಂದ್ರೆ?"
ಶಂಕರನಾರಾಯಣಯ್ಯ ಉತ್ತರವಿತ್ತ:
"ಪ್ರೊಫೆಸರುಗಳು ದುಡ್ಡು ಕೊಡ್ತಾರೇನೆ?"
ಚಂಪಾವತಿ ನಕ್ಕು ನುಡಿದಳು:
"ಅದರ ಬದಲು ಅವರಿಗೊಂದಿಷ್ಟು ‍ಕೈನಾದರೂ ತೋರಿಸ್ಬಾರ್ದೆ?"
"ಕೈ ತೋರಿಸಿ ಅವಲಕ್ಷಣ ಅನ್ನಿಸ್ಕೊಳ್ಲೇನು?"
"ಏನಿಲ್ಲ. ನಿಮ್ಮ ಕೈ ನೋಡಿ,ಎಲ್ಲಾ ಚೆನ್ನಾಗಿದೇಂತ ಆತ ಅನ್ನದೇ ಇದ್ದರೆ
ಆಮೇಲೆ ಹೇಳಿ!"
"ಹೌದು ಅಷ್ಟು ಸೊಗಸಾಗಿ ಬೋರ್ಡು ಬರೆದಿರೋ ಕೈ!"

18