ಪುಟ:Rangammana Vathara.pdf/೧೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

138

ಸೇತುವೆ

ಮೂರನೆಯ ದಿನ ಬೆಳಗು ಮುಂಜಾನೆ ಬೋರ್ಡು ಅಲ್ಲಿರಲಿಲ್ಲ. ರಾತ್ರೆ
ಹೊತ್ತು ಯಾರೋ ಎಗರಿಸಿಕೊಂಡು ಹೋಗಿದ್ದರು. ಅಳುವ ಹಾಗಾಯಿತು ಪದ್ಮ
ನಾಭಯ್ಯನಿಗೆ. ಅವಾಚ್ಯ ಪದಗಳ ಪ್ರಯೋಗವೆಲ್ಲ ಮುಗಿದ ಮೇಲೆ ಆತ ಗುಮ್ಮೆಂದು
ಸುಮ್ಮನಾದ. ವಠಾರದ ಎಷ್ಟೋ ಮನೆಗಳಲ್ಲಿ ಆ ಪ್ರಕರಣದಿಂದಾಗಿ ಜನ ನಕ್ಕು ನಕ್ಕು
ಆರೋಗ್ಯವಂತರಾದರು. ಪದ್ಮನಾಭಯ್ಯನ ಹೆಸರು ಪ್ರೊಫೆಸರ್ ಎಂದು
ಮಾರ್ಪಟ್ಟಿತು.
ಅದಾದ ಮಾರನೆಯ ದಿನ ಪದ್ಮನಾಭಯ್ಯನ ಅಳಿಯ ಬಂದು ಗರ್ಭಿಣಿ ಹೆಂಡತಿ
ಯನ್ನು ಕರೆದೊಯ್ದ...
...ಚಂಪಾವತಿ ತುಂಬಾ ಖುಶಿಯಾಗಿದ್ದಳು. ಶಂಕರನಾರಾಯಣಯ್ಯನಿಗೆ ಅರ್ಥ
ವಾಗಲಿಲ್ಲ.
"ಯಾಕೆ ಹಾಗೆ ನನ್ನನ್ನೇ ನೋಡ್ತಿದ್ದೀಯಾ?"
"ಎಲ್ನೋಡ್ದೆ?"
ಹಾಗೆ ಕೇಳಿ,ಗಟ್ಟಿಯಾಗಿ ಚಂಪಾ ನಕ್ಕಳು.
ರಹಸ್ಯ ಬಹಳ ಹೊತ್ತು ಬಗೆಹರಿಯಲೇ ಇಲ್ಲ.
ದೀಪ ಆರಿದಾಗಲಿನ್ನೂ ಹಾಸಿಗೆ ಬಿಡಿಸಿರಲಿಲ್ಲ. ಕತ್ತಲಲ್ಲೆ ಹಾಸುತ್ತ ಚಂಪಾ
ಹೇಳಿದಳು:
"ಇವತ್ತು ಪ್ರೊಫೆಸರ್ ರ ಅಳಿಯ ಬಂದಿದ್ರೂಂದ್ರೆ..."
"ಅಂತೂ ಬೋರ್ಡು ಬರೆಸಿ ಬಿರುದು ಗಿಟ್ಟಿಸ್ಕೊಂಡು!"
"ಹೂಂ. ಆ ಅಳಿಯ ಪ್ರೊಫೆಸರ್ ಮಗಳ್ನ ಕರಕೊಂಡು ಹೋದ."
"ಆಕೆ ಬಸುರೀಂತ ಹೇಳಿದ್ಯಲ್ಲೇ ನೀನು?"
"ಹೌದು. ಅದಕ್ಕೇ ಕರಕೊಂಡು ಹೋದ. ಅನುಕೂಲಸ್ಥ ಅಂತ ತೋರುತ್ತೆ.
ಜಗಳ ಆಯ್ತು,ಚೊಚ್ಚಲ ಬಾಣಂತನ ಇಲ್ಲೇ ಆಗ್ಲಿ ಅಂದರು ಪ್ರೊಫೆಸರ್ ಹೆಂಡತಿ.
ಬೇಡ,ನಮ್ಮೂರಲ್ಲಿ ಒಳ್ಳೇ ಆಸ್ಪತ್ರೆ ಇದೆ. ಅಲ್ಲಿಗೇ ಕರಕೊಂಡು ಬಾ ಅಂದಿದಾರೆ
ನಮ್ಮಮ್ಮ_ಎಂದು ಅಳಿಯ. ಹುಡುಗಿ ಎದ್ದೇ ಬಿಟ್ಟಳು ಗಂಡನು ಜತೆಗೆ."
"ಭೇಷ್!"
ಆಮೇಲೆ ಚಂಪಾ ಮಾತನಾಡಲಿಲ್ಲ.ತಲೆಗಳು ದಿಂಬುನ್ನು ಸೋಂಕಿದುವು.
ಒಮ್ಮೆಲೆ ಶಂಕರನಾರಾಯಣಯ್ಯ ಏನೋ ಹೊಳೆದವನಂತೆ ಅಂದ:
"ಚಂಪಾ!"
"ಏನು?"
"ಈ ತಿಂಗಳು ನೀನು ಹೊರಗೆ ಕೂತೇ ಇಲ್ವಲ್ಲೇ!"
ಚಂಪಾ ನಗೆ ತಡೆದುಕೊಂಡು ಹೇಳಿದಳು:

"ಇಲ್ಲ.ಅದ್ದಕ್ಕೆ?"